ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಫ್ಯಾನ್ಸ್ ವಾರ್ಗೆ ಒಂದು ದೊಡ್ಡ ಇತಿಹಾಸವೇ ಇದೆ. ಈ ಇತಿಹಾದ ಭಾಗವಾಗಲೂ ಇನ್ನೂ ಸ್ಟಾರ್ ನಟರ ಫ್ಯಾನ್ಸ್ ವಾರ್ ಮುಂದುವರೆಯುತ್ತಲೇ ಇರುವುದು ಚಂದನವನದ ದುರದೃಷ್ಟವೇ ಸರಿ.
ಕನ್ನಡ ಚಿತ್ರರಂಗ ಎಲ್ಲಾ ಚಿತ್ರರಂಗಗಳಂತೆ ಕೊರೋನಾ ಹೊಡೆತಕ್ಕೆ ಸಿಲುಕಿ ನಜ್ಜುಗುಜ್ಜಾಗಿ ಹೋಗಿದೆ. ಅದೆಷ್ಟೋ ನಿರ್ಮಾಪಕರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಇನ್ನೂ ಅದೆಷ್ಟೋ ನಿರ್ಮಾಪಕರು ಈಗಾಗಲೇ ಚಿತ್ರ ನಿರ್ಮಾಣ ಮಾಡಿದ್ದರೂ, ತಂದ ಹಣಕ್ಕೆ ಬಡ್ಡಿ ಕಟ್ಟುತ್ತಾ ಬಿಡುಗಡೆಗಾಗಿ ಕಾದುಕುಳಿತಿದ್ದಾರೆ. ಸ್ಯಾಂಡಲ್ ವುಡ್ನ ಅನ್ನದಾತರ ಕಥೆಯೇ ಈಗೆ ಆದರೆ, ಇಡೀ ಚಿತ್ರರಂಗದ ಸಣ್ಣ ಸಣ್ಣ ಕಲಾವಿದರ ತಂತ್ರಜ್ಞರ ಕಥೆ ಇನ್ನು ಏನಿರಬಹುದು ಅಲ್ಲವೇ..? ನಿರ್ಮಾಪಕ, ಕಲಾವಿದರು ಮಾತ್ರವಲ್ಲದೇ ಚಿತ್ರಮಂದಿರಗಳ ಮಾಲೀಕರು ಕೊರೋನಾದಿಂದ ಅನುಭವಿಸಿದ ಚಿತ್ರಹಿಂಸೆ ಅಷ್ಟಿಷ್ಟಲ್ಲ. ಈ ನಡುವೆ ರಾಬರ್ಟ್, ಕೆಜಿಎಫ್, ಜೇಮ್ಸ್, ಭಜರಂಗಿ-2, ವಿಕ್ರಾಂತ್ ರೋಣ, 777 ಚಾರ್ಲಿ ಸೇರಿದಂತೆ ಇತರೆ ಚಿತ್ರಗಳ ಸಹಾಯದಿಂದ ಚಿತ್ರರಂಗ ಇನ್ನೂ ಗಟ್ಟಿಯಾಗಿಯೇ ನೆಲೆ ನಿಂತಿದೆ.
ಈಗ ಕನ್ನಡ ಚಿತ್ರರಂಗ ಮತ್ತೆ ಪುಡಿದೇಳುವ ಸಮಯ. ಕನ್ನಡದ ಕೆಲ ಸಿನೆಮಾಗಳ ಆ ಸಾಧನೆಯನ್ನು ಮಾಡಿಯೂ ತೋರಿಸಿವೆ. ಈ ಚಿತ್ರಗಳ ಸಾಧನೆಯ ಅಧಾರದ ಮೇಲೆ ಕನ್ನಡದ ಮತ್ತಷ್ಟೂ ಚಿತ್ರಗಳು ಹಿಂದಿನ ಚಿತ್ರಗಳ ದಾಖಲೆ ಮುರಿಯಬೇಕಿದೆ. ಕನ್ನಡದ ಪ್ರೇಕ್ಷಕನಿಗೆ ಮನರಂಜನೆ, ಉತ್ತಮ ಸಂದೇಶಗಳ ಜಾಮೂನು ಬಡಿಸಬೇಕಿದೆ.
ಆದರೆ, ಇಂತಹ ಸಮಯದಲ್ಲಿಯೇ ರಾಜ್ಯದಲ್ಲಿ ಸ್ಟಾರ್ ನಟರ ಫ್ಯಾನ್ಸ್ವಾರ್ ಮತ್ತೆ ಮುನ್ನೆಲೆಗೆ ಬಂದಿದೆ. ಈ ಫ್ಯಾನ್ಸ್ ವಾರ್, ಚಂದನವನಕ್ಕೂ, ಕನ್ನಡಕ್ಕೂ ಹಾಗೂ ಕನ್ನಡಿಗರ ತೇಜಸ್ಸಿಗೂ ಕಪ್ಪು ರಾಡಿ ಎರಚಿದಂತೆ. ಈ ಬಗ್ಗೆ ನಟರ ಆದಿಯಾಗಿ ಅವರ ಅಭಿಮಾನಿಗಳು ಎಚ್ಚರವಹಿಸಬೇಕಿದೆ.
ಕಳೆದ ದಶಕ ಹಾಗು ಅದರ ಹಿಂದೆಲ್ಲ ಕೇವಲ ಬಾಯಿ ಮಾತಿನ ಹಾಗೂ ಗಾಳಿ ಸುದ್ದಿಯ ರೂಪದಲ್ಲಿರುತ್ತಿದ್ದ ಫ್ಯಾನ್ಸ್ ವಾರ್ ಇದೀಗ ರಾಜಾರೋಷವಾಗಿ ಮುನ್ನೆಲೆಗೆ ಬಂದಿದೆ. ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳು ಇದಕ್ಕೆ ಮತ್ತಷ್ಟು ಇಂಬು ನೀಡುತ್ತಿವೆ.
ಸುದೀಪ್ ಅವರ ವಿಕ್ರಾಂತ್ ರೋಣ ಸಿನೆಮಾ ಬಿಡುಗಡೆ ಆದ ನಂತರ ಹಾಗೂ ಎರಡು ದಿನದ ಹಿಂದೆ ದರ್ಶನ್ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ನಂತರ ಈ ಫ್ಯಾನ್ಸ್ ವಾರ್ ಮತ್ತೆ ಮುನ್ನೆಲೆಗೆ ಬಂದಿದೆ.
ಸುದೀಪ್ ಅವರ ವಿಕ್ರಾಂತ್ ರೋಣ ಸಿನೆಮಾ ಬಿಡುಗಡೆಯಾದ ಕ್ಷಣದಿಂದಲೇ ಕೆಲವು ಜನರ ವಿರೋಧ ಹಾಗೂ ನಕಾರಾತ್ಮಕ ಸಂದೇಶ(ನೆಗೆಟಿವ್ ಕಾಮೆಂಟ್ಸ್)ಗಳನ್ನು ಎದುರಿಸಬೇಕಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ನೋಡದೇ ಇರುವ ಹಲವರು ನಕಾರಾತ್ಮಕ ಸಂದೇಶಗಳನ್ನು ಬಿತ್ತರಿಸಿದರು. ಇದು ಸಹಜವಾಗಿ ದರ್ಶನ್ ಹಾಗೂ ನಟ ಸುದೀಪ್ ಅವರ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ಗೆ ಕಾರಣವಾಗಿತ್ತು. ಈ ಚಿತ್ರದ ನಿರ್ಮಾಪಕರೂ ತಮ್ಮ ಅಭಿಮಾನಿಯೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನೂ ತೋಡಿಕೊಂಡಿದ್ದರು. ಅಲ್ಲದೇ, ಕರ್ನಾಟಕದಲ್ಲಿ ವಿಕ್ರಾಂತ್ ರೋಣ ಚಿತ್ರದ ಗಳಿಕೆ ಕಡಿಮೆಯಾಗಲು ಈ ನಕಾರಾತ್ಮಕ ಸಂದೇಶಗಳೇ ಕಾರಣ ಎನ್ನುವ ಟಾಕ್ ಗಾಂಧಿನಗರದಲ್ಲಿ ಹರಿದಾಡಿತ್ತು. ಸ್ವಲ್ಪ ದಿನದಲ್ಲಿಯೇ ಈ ಫ್ಯಾನ್ಸ್ ವಾರ್ ಮುಮ್ಮುಖದ ಪರದೆಯಿಂದ ಹಿಮ್ಮುಖವಾಗಿತ್ತು.
ಇದೀಗ, ದಿವಂಗತ ನಟ ಪುನೀತ್ ರಾಜ್ಕುಮಾರ್ ಹಾಗೂ ನಟ ದರ್ಶನ್ ಅವರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳ ಬಿಗಿಯಾದ ಫ್ಯಾನ್ಸ್ ವಾರ್ ಆರಂಭವಾಗಿದೆ. ನಿನ್ನೆಯಷ್ಟೇ, ಖಾಸಗಿ ಯೂಟ್ಯೂಬ್ ಚಾನೆಲ್ಗೆ ನಟ ದರ್ಶನ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ರಾಬರ್ಟ್ ಸಿನೆಮಾದ ಬಗ್ಗೆ ತಮ್ಮ ಅಭಿಮಾನಿಗಳ ಪ್ರಚಾರದ ಪ್ರಶ್ನೆಗೆ ಉತ್ತರಿಸಿದ್ದ ಅವರು ಮಾತನಾಡುತ್ತಾ ನಾವು ಸತ್ತ ಮೇಲೆ ನಮ್ಮ ಅಭಿಮಾನಿಗಳು ಸೆಲೆಬ್ರೇಟ್ ಮಾಡೋದನ್ನ ನೋಡಿದ್ದೇವೆ. ಉದಾಹರಣೆಗೆ ಪುನೀತ್ ರಾಜ್ಕುಮಾರ್ ಅವರೊಬ್ಬರದೇ ಸಾಕು. ಆದರೆ, ನನ್ನ ಅಭಿಮಾನಿಗಳು ತಮ್ಮ ಅಭಿಮಾನವನ್ನು ನಾನು ಬದುಕಿದ್ದಾಗಲೇ ತೋರಿಸಿಬಿಟ್ಟರಲ್ಲ ನನಗೆ ಅಷ್ಟು ಸಾಕು ಎಂದಿದ್ದರು.
ಇದನ್ನು, ವಿವಾದ ಮಾಡಿ ಫ್ಯಾನ್ಸ್ ವಾರ್ಗೆ ದಾರಿ ಮಾಡಿಕೊಡುವ ಅವಶ್ಯಕತೆ ಇರಲಿಲ್ಲ. ಅವರ ಆ ಮಾತಿನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನಿಸುವ ಯಾವುದೇ ಲವಲೇಶದ ಲಕ್ಷಣವು ಇದ್ದಂತಿಲ್ಲ. ಆದರೆ, ನಟ ದರ್ಶನ್ ಮಾತಿನ ಭರದಲ್ಲಿ ಅಪ್ಪು ಅವರ ಅಭಿಮಾನಿಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹೋಲಿಕೆ ಮಾಡಿಕೊಂಡಿದ್ದರು. ಆ ಮೂಲಕ ತಮ್ಮ ಅಭಿಮಾನಿಗಳ ಶ್ರಮವನ್ನು ಹೊಗಳಿಕೊಂಡಿರುವ ಅವರ ಈ ಮಾತನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆಯೂ ಇರಲಿಲ್ಲ.
ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ ಬಾಕ್ಸ್ ಆಫೀಸ್ ಕರ್ನಾಟಕ ಎಂಬ ಖಾತೆಯಿಂದ ಖಾಸಗಿ ಯೂಟ್ಯೂಬ್ ವಾಹಿನಿಯ ತುಣಕೊಂದನ್ನು ಹಂಚಿಕೊಳ್ಳುವ ಮೂಲಕ ದರ್ಶನ್ರ ಈ ಮಾತಿಗೆ ಮೊದಲ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಅನಂತರ ಇದು ಎಲ್ಲೆಡೆ ಹರಡಿ ಇದೀಗ, ಫ್ಯಾನ್ಸ್ ವಾರ್ ನ ಕಾರಣಕತೃವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರ ಅಭಿಮಾನಿಗಳು ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರನ್ನು ಅವಮಾನಿಸುತ್ತಿರುವುದು. ಮತ್ತು ಅವರ ವಿರೋಧಿ ಫ್ಯಾನ್ಸ್ ನಟ ದರ್ಶನ್ ಅವರನ್ನು ಹೀಯಾಳಿಸುತ್ತಿರುವದು ಸರ್ವೇ ಸಾಮಾನ್ಯವಾಗಿದೆ. ಈ ಫ್ಯಾನ್ಸ್ ವಾರ್ನಲ್ಲಿ ಬಳಕೆಯಾಗದೇ ಇರೋ ಪದಗಳೇ ಇಲ್ಲ ಎನ್ನುವಷ್ಟವರ ಮಟ್ಟಿಗೆ ಕೀಳು ಅಭಿರುಚಿಯ ತೋರ್ಪಡಿಕೆಯಾಗುತ್ತಿದೆ. ಈ ಫ್ಯಾನ್ಸ್ ವಾರ್ ಮಧ್ಯೆ ನಟ ಸುದೀಪ್ ಅವರ ಅಭಿಮಾನಿಗಳು ಕ್ರಾಂತಿ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ರನ್ನು ಟ್ರೋಲ್ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಸಾಮಾಜಿಕ ಜಾಲತಾಣ ಬಳಸುತ್ತಿರುವ ನಾವೆಲ್ಲರೂ ಗಮನಿಸಿಯೇ ಇರುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ತೊಟ್ಟಿರುವ(ಗೌಪ್ಯವಾಗಿರುವ) ವ್ಯಕ್ತಿಗಳು ಖ್ಯಾತನಾಮ ನಟರ ಅಭಿಮಾನಿಗಳ ಮಧ್ಯೆ ಕಂದಕ ಸೃಷ್ಠಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಈ ಫ್ಯಾನ್ಸ್ವಾರ್ನ ನಮೂಲ ಬೇದಿಸುತ್ತ ಹೋದಂತೆ ಒಳಸುಳಿಗೆ ಕಂಡುಬರುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರು ತಮ್ಮ ಸ್ವೇಚ್ಚಾಚಾರದ ವರ್ತನೆಗೆ ಅಂತ್ಯವಾಡಬೇಕು. ಪ್ರತಿಯೊಬ್ಬ ನಟರೂ ಗೌರವಾನ್ವಿತರೇ. ಮತ್ತೊಬ್ಬ ನಟನ ಬಗ್ಗೆ ದ್ವೇಷ ಭಾವನೆ ಬಿಡಬೇಕು. ಅಲ್ಲದೇ, ಯಾವುದೋ ನಟನ, ರಾಜಕೀಯ ನೇತಾರನ ಮೇಲಿನ ಕುರುಡು ಅಭಿಮಾನಕ್ಕೆ ತಡೆಯೊಡ್ಡಿ ನಾಡು, ನುಡಿ, ದೇಶದ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು.
ಈ ಮೇಲಿನ ನಟರೆಲ್ಲರೂ ಗೌರವಾನ್ವಿತರೇ ತಮ್ಮ ಕೈಲಾದ ಸಹಾಯವನ್ನು ಸಮಾಜಕ್ಕಾಗಿ ಮಾಡುತ್ತಲೇ ಬಂದವರು. ಇವರ ನಡುವೆ ಅಭಿಮಾನಿಗಳ ಕಾರಣಕ್ಕಾಗಿ ಮತ್ತಷ್ಟು ಕಂದಕ ಸೃಷ್ಠಿಸುವಂತಾಗಬಾರದು.
ಅಭಿಮಾನಿಗಳು ತಮ್ಮ ನಟನ ಬಗೆಗಿನ ಅಭಿಮಾನವನ್ನು ಮತ್ತೊಬ್ಬ ನಟನನ್ನು ಅವಮಾನಿಸುವ, ಹೀಯಾಳಿಸುವ ಮೂಲಕವೇ ತೋರಿಸಬೇಕೆಂದಿಲ್ಲ. ಅವರ ಹೆಸರಿನಲ್ಲಿ ಹಲವಾರು ಸೇವಾ ಕಾರ್ಯಗಳನ್ನೂ ಮಾಡಬಹುದು.
ಏನೇ ಆಗಲಿ ಅಂತಿಮವಾಗಿ ಕನ್ನಡಿಗರೆಲ್ಲರೂ ಇಂತಹ ಅಂಧ ಅಭಿಮಾನದಿಂದ ಹೊರಬರಬೇಕು. ಕನ್ನಡದ ಉದಯೋನ್ಮುಖ ನಟರು, ಉತ್ತಮ ಚಿತ್ರಗಳನ್ನು ಬೆಳೆಸಬೇಕು. ಪೈರಸಿ ಎಂಬ ಭೂತಕ್ಕೆ ಎದೆಯಿಡ್ಡಲಾಗದ ಚಿತ್ರರಂಗದ ಬೆನ್ನಿಗೆ ನಿಲ್ಲಬೇಕಿದೆ.
-ಸಿದ್ದನಗೌಡ