ಒಡಿಶಾದ ಖ್ಯಾತ ಕಿರುತೆರೆ ನಟಿ ರಶ್ಮಿರೇಖಾ ಓಜಾ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ನಯಪಲ್ಲಿಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆಯಾಗಿದ್ದು, ಸಾವಿಗೆ ಸರಿಯಾದ ಕಾರಣ ಈವರೆಗೂ ತಿಳಿದುಬಂದಿಲ್ಲ.
ಇದರ ನಡುವೆ ರಶ್ಮಿ ಸಾವಿನ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದೆ. ಜೊತೆಗೆ ರಶ್ಮಿರೇಖಾ ಸಾವಿನ ಹಿಂದೆ ಬಾಯ್ಫ್ರೆಂಡ್ ಸಂತೋಷ್ ಕೈವಾಡವಿದೆ ಎಂದು ನಟಿಯ ತಂದೆ ಆರೋಪಿಸಿದ್ದಾರೆ. ಆದರೆ ಸಾವಿಗೆ ಪ್ರೇಮ ವೈಫಲ್ಯ ಕಾರಣ ಎನ್ನಲಾಗುತ್ತಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆ ಆರಂಭಿಸಿರುವ ಪೊಲೀಸರು ಸ್ಥಳದಲ್ಲಿ ದೊರಕಿರುವ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಸೂಸೈಡ್ ನೋಟ್ನಲ್ಲಿ ‘ಮಿಸ್ ಯು ಬಾಬಾ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ತುಂಬಾ ಕೆಟ್ಟ ಮಗಳು’ ಎಂದು ಬರೆಯಲಾಗಿದೆ. ಕೆಲ ಮೂಲಗಳ ಮಾಹಿತಿ ಪ್ರಕಾರ ರಶ್ಮಿರೇಖಾ ನಯಾಪಲ್ಲಿ ತಮ್ಮ ಮನೆಯಲ್ಲಿ ಸ್ನೇಹಿತ ಸಂತೋಷ್ನೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಒಡಿಶಾದ ಕಿರುತೆರೆಯಲ್ಲಿ ನಟಿಸುತ್ತಿದ್ದ ರಶ್ಮಿರೇಖಾ ಓಜಾ ಅವರು ಕಿರುತೆರೆ ನಟನೆಯಿಂದ ಖ್ಯಾತಿ ಪಡೆದುಕೊಂಡಿದ್ದರು. ರಶ್ಮಿ ಒಡಿಶಾದ ಜಗತ್ಸಿಂಗ್ಪುರ್ ಜಿಲ್ಲೆಯವರು. ಇವರು ಒಡಿಶಾದ ಕೆಮಿತಿ ಕಹಿಬಿ ಕಹಾ ಧಾರಾವಾಹಿ ಕಿರುತೆರೆ ಲೋಕದಲ್ಲಿ ಪ್ರಸಿದ್ಧರಾಗಿದ್ದರು. ಇದೀಗ ಅವರ ಸಾವು ಕಿರಿತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರದಲ್ಲಿ ನಟಿಯ ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬರಲಿದೆ. ಪ್ರಾಥಮಿಕ ತನಿಖೆ ಆಧರಿಸಿ ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಪೊಲೀಸರಿಗೆ ಸಿಕ್ಕ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ನಟಿ ಬರೆದಿಟ್ಟಿದ್ದಾರೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ದೊರಕಲಿದೆ ಎಂದು ಭುವನೇಶ್ವರದ ಡಿಸಿಪಿ ಅವರು ಮಾಹಿತಿ ನೀಡಿದ್ದಾರೆ.