ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ದ ಆಕ್ಷೇಪಾರ್ಹ, ನಿಂದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಈ ಕುರಿತು ಮಾತನಾಡಿದ್ದ ಯತೀಂದ್ರ, ಅಮಿತ್ ಶಾ ಒಬ್ಬ ರೌಡಿ , ಗೂಂಡಾ ಎಂದು ವಾಗ್ದಾಳಿ ನಡೆಸಿದ್ದರು.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಚುನಾವಣಾ ಆಯೋಗದಲ್ಲಿ ಅವರ ವಿರುದ್ದ ದೂರು ಸಲ್ಲಿಸಿದ್ದರು. ಜೊತೆಗೆ, ಯತೀಂದ್ರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರು.
ದೂರು ಸ್ವೀಕರಿಸಿರುವ ಚುನಾವಣಾ ಆಯೋಗ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್ ಕಳಿಸಿದ್ದು ಅವರ ನಿಂದನಾತ್ಮಕ ಭಾಷಣಕ್ಕೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ಜೊತೆಗೆ, ಇನ್ನು ಮುಂದೆ ಸಾರ್ವಜನಿಕರ ಭಾಷಣಗಳಲ್ಲಿ ಭಾಷೆ ಮತ್ತು ಪದಬಳಕೆಯ ಮೇಲೆ ನಿಯಂತ್ರಣ ಕಾಯ್ದುಕೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.