ಜಾತಿ ಗಣತಿ ಜಾರಿಗೆ ಬದ್ಧ ಎಂದಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವೈಜ್ಞಾನಿಕ ಸಮೀಕ್ಷೆ ಮಾಡಲು ಹಲವು ಸಮುದಾಯಗಳಿಂದ ಆಗ್ರಹಿಸಿವೆ ಎಂದು ಹೇಳಿದ್ದಾರೆ.
ʻಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆʼ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು.
ಜಾತಿ ಗಣತಿ ವರದಿ ತಿರಸ್ಕಾರಕ್ಕೆ ನೀವು ಸಹಮತ ವ್ಯಕ್ತಪಡಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ
ʻಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು, ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಹೋರಾಟ ಮಾಡಲಾಗುತ್ತಿದೆ.
ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆʼ ಎಂದು ತಿಳಿಸಿದರು.
ನಮ್ಮ ಸಮಾಜದ ಬಗ್ಗೆ ಗೌರವ, ಅಭಿಮಾನ:
ನೀವು ಕೂಡ ಪತ್ರಕ್ಕೆ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ
ʻನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆʼ ಎಂದು ತಿಳಿಸಿದರು.
ADVERTISEMENT
ADVERTISEMENT