ತಮ್ಮನ್ನು ಬಂಧಿಸಬಹುದು ಎಂಬ ಭೀತಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮೂರನೇ ಬಾರಿಯೂ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿಲ್ಲ.
ದೆಹಲಿ ಅಬಕಾರಿ ಹಗರಣದಲ್ಲಿ ಇವತ್ತು ಜನವರಿ 3ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಮೂರನೇ ಬಾರಿ ಈಡಿ ಸಮನ್ಸ್ ನೀಡಿತ್ತು.
ಈ ಹಿಂದೆ ನವೆಂಬರ್ 2 ಮತ್ತು ಡಿಸೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ಡಿಸೆಂಬರ್ 21ರಂದು ವಿಪಾಸನ ಧ್ಯಾನದಲ್ಲಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲ್ಲ ಎಂದು ಕೇಜ್ರಿವಾಲ್ ಅವರು ಈಡಿಗೆ ತಿಳಿಸಿದ್ದರು.
ಇವತ್ತೂ ವಿಚಾರಣೆಗೆ ಗೈರಾಗಿರುವ ಕೇಜ್ರಿವಾಲ್ ಅವರು ಈಡಿಗೆ ಪತ್ರವನ್ನು ಬರೆದಿದ್ದಾರೆ.
ಜಾರಿ ನಿರ್ದೇಶನಾಲಯದ ತನಿಖೆಯೊಂದಿಗೆ ಸಹಕರಿಸಲು ಸಿದ್ಧ, ಆದರೆ ವಿಚಾರಣೆಗೆ ಹಾಜರಾಗುವಂತೆ ಈಡಿ ನೀಡಿರುವ ಸಮನ್ಸ್ ಕಾನೂನುಬಾಹಿರ. ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಈಡಿ ಯೋಚಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಪ್ರಚಾರ ಮಾಡಬಾರದು ಎನ್ನುವುದು ಬಿಜೆಪಿಯವರ ಉದ್ದೇಶ
ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಅಬಕಾರಿ ಹಗರಣದಲ್ಲಿ ಈಗಾಗಲೇ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಆಪ್ನ ರಾಷ್ಟ್ರೀಯ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನು ಬಂಧಿಸಲಾಗಿದೆ.