ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಂಧನ ಭೀತಿಯಲ್ಲಿದ್ದ ಯುವ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆಗೆ ಸದ್ಯ ರಿಲೀಫ್ ಸಿಕ್ಕಿದೆ.
ಖರ್ಗೆ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದ ಹಿನ್ನೆಲೆ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ನ್ಯಾಯಪೀಠ ಎಫ್ಐಆರ್ ಗೆ ತಡೆ ನೀಡಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆ ಮುಂದೂಡಲಾಗಿದೆ. ಹೀಗಾಗಿ ಸೂಲಿಬೆಲೆ ಸದ್ಯ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ರಾಜಕೀಯ ಉದ್ದೇಶದಿಂದ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಚಕ್ರವರ್ತಿ ಸೂಲಿಬೆಲೆ ಅಲಿಯಾಸ್ ಮಿಥುನ್ ಚಕ್ರವರ್ತಿ ದೇವಿದಾಸ್ ಸೇಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರಿದ್ದ ಪೀಠ ವಿಚಾರಣೆ ನಡೆಸಿ, ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲರು ವಾದ ಮಂಡಿಸಿ, ರಾಜಕೀಯ ಕಾರಣಕ್ಕಾಗಿ ದುರುದ್ದೇಶದಿಂದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ದೂರುದಾರರು ಕೆಪಿಸಿಸಿಯ ಪದಾಧಿಕಾರಿಯಾಗಿದ್ದು, ಸೂಲಿಬೆಲೆಗೆ ಮುಜುಗರ ಉಂಟು ಮಾಡಲು ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಜನವರಿ 18ರಂದು ಯುವ ಬ್ರಿಗೇಡ್ ವತಿಯಿಂದ ರಾಯಚೂರಿನ ಸಿರಿವಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಸೂಲಿಬೆಲೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ನಿಂದಿಸಿದ್ದಲ್ಲದೇ ಆಧಾರರಹಿತವಾಗಿ ಸುಳ್ಳು ಭಾಷಣ ಮಾಡಿದ್ದಾರೆ ಎಂದು ಕಲಬುರಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಕಲಬುರಗಿಯ ಬ್ರಹ್ಮಾಪುರ ಠಾಣೆಗೆ ದೂರು ನೀಡಿದ್ದರು.