ರಾತ್ರಿ 11 ಗಂಟೆ ಬಳಿಕ ರಸ್ತೆಯಲ್ಲಿ ಹೋಗ್ತಿದ್ದ ಗಂಡ-ಹೆಂಡತಿಗೆ ದಂಡ – ಇಬ್ಬರು ಪೊಲೀಸರ ಅಮಾನತು

Representative Image

ರಾತ್ರಿ 11 ಗಂಟೆಯ ಬಳಿಕ ನಡೆದುಕೊಂಡು ಹೋಗುತ್ತಿದ್ದರು ಎಂಬ ಕಾರಣಕ್ಕೆ ಗಂಡ-ಹೆಂಡತಿಗೆ 1 ಸಾವಿರ ರೂಪಾಯಿ ದಂಡ ಹಾಕಿದ್ದ ಬೆಂಗಳೂರಿನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಸಂಪಿಗೆಹಳ್ಳಿ ಪೊಲೀಸ್​ ಠಾಣೆಯ ಹೆಡ್​​ಕಾನ್ಸ್​​ಸ್ಟೇಬಲ್​ ರಾಜೇಶ್​ ಮತ್ತು ಕಾನ್ಸ್​​ಸ್ಟೇಬಲ್​ ನಾಗೇಶ್​​ ಅವರನ್ನು ಅಮಾನತು ಮಾಡಿರುವ ಈಶಾನ್ಯ ವಲಯದ ಎಸಿಪಿ ಅನೂಪ್​ ಶೆಟ್ಟಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಪೊಲೀಸರು ಕೊಟ್ಟ ಕಿರುಕುಳದ ಬಗ್ಗೆ ಕಾರ್ತಿಕ್​ ಪತ್ರಿ ಎಂಬವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದರು.

ರಾತ್ರಿ 12.30ಕ್ಕೆ ನಾವು ನಮ್ಮ ಸ್ನೇಹಿತನ ಹುಟ್ಟುಹಬ್ಬದ ಕೇಕ್​ ಕಟ್​ ಮಾಡಿ ಅಪಾರ್ಟ್​ಮೆಂಟ್​ಗೆ (ಮಾನ್ಯತಾ ಟೆಕ್​ ಪಾರ್ಕ್​ ಬಳಿ) ವಾಪಸ್​ ಬರುತ್ತಿದ್ದಾಗ ಮನೆಯ ಬಳಿ ನಮ್ಮನ್ನು ತಡೆದ ಪೊಲೀಸರು ವಿಚಾರಣೆ ನಡೆಸಿದರು. ನಮ್ಮ ಐಡಿ ಕಾರ್ಡ್​​ ತೋರಿಸುವಂತೆ ಹೇಳಿ ಫೋನ್​ ಕಿತ್ಕೊಂಡ್ರು. ಅದೃಷ್ಟವಶಾತ್​ ನಮ್ಮ ಬಳಿ ಆಧಾರ್​ ಕಾರ್ಡ್​ ಇತ್ತು. ನಮ್ಮಿಬ್ಬರ ಸಂಬಂಧ, ನಮ್ಮ ಕೆಲಸ ಸ್ಥಳ, ನಮ್ಮ ತಂದೆ-ತಾಯಿ ಬಗ್ಗೆಯೆಲ್ಲ ಕೇಳಿದರು.

ಆ ಇಬ್ಬರು ಪೊಲೀಸರಲ್ಲಿ ಒಬ್ಬರು ಚಲನ್​ ತೆಗೆದುಕೊಂಡು ಆಧಾರ್​ ಕಾರ್ಡ್​​ ನಂಬರ್​ನ್ನು ಬರೆದುಕೊಂಡರು. ರಶೀದಿ ಯಾಕೆ ಬರೆಯುತ್ತಿದ್ದೀರಿ ಎಂದು ಕೇಳಿದಾಗ ರಾತ್ರಿ 11 ಗಂಟೆ ಆದ್ಮೇಲೆ ಬೀದಿಗಳಲ್ಲಿ ಯಾರೂ ಓಡಾಡುವಂತಿಲ್ಲ, ಅದಕ್ಕೆ ದಂಡ ಹಾಕ್ತಿದ್ದೀವಿ ಎಂದು ಆರಂಭದಲ್ಲಿ ಮೂರು ಸಾವಿರ ರೂಪಾಯಿ ದಂಡ ಕಟ್ಟುವಂತೆ ಹೇಳಿದರು, ಕೊನೆಗೆ 1 ಸಾವಿರ ರೂಪಾಯಿ ದಂಡ ಕಟ್ಟಿಸಿಕೊಂಡರು.

ಮತ್ತೆ ಮತ್ತೆ ರೌಂಡ್​ ಹೊಡೆಯುತ್ತೇವೆ, ಒಂದು ವೇಳೆ ನೀವು ಮತ್ತೆ ತಿರುಗಾಡಿದ್ದು ಕಂಡುಬಂದ್ರೆ ಬಲವಾದ ಕೇಸ್​ ಹಾಕುವುದಾಗಿ ಬೆದರಿಕೆ ಹಾಕಿದರು

ಎಂದು ಪತ್ರಿ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದರು.

ಈ ದೂರು ಆಧರಿಸಿ ಇಬ್ಬರೂ ಪೊಲೀಸರನ್ನು ಅಮಾನತು ಮಾಡಲಾಗಿದೆ.

ತನ್ನ ಪೊಲೀಸರ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸ್​ ಹೇಳಿದೆ.

LEAVE A REPLY

Please enter your comment!
Please enter your name here