ಮತಾಂತರ ಕಾಯ್ದೆಗೆ ರಾಜ್ಯಪಾಲಕ ಅಂಕಿತ ಬಿದ್ದ ಬೆನ್ನಲ್ಲೇ ಇತ್ತ ಕೊಡಗಿನಲ್ಲಿ ದಂಪತಿ ವಿರುದ್ಧ ಬಲವಂತದ ಮತಾಂತರ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮಕ್ಕೆ ಕೇರಳದಿಂದ ಬಂದ ದಂಪತಿ ಗ್ರಾಮದಲ್ಲಿರುವ ಬಡ ವರ್ಗದವರನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ KL-12-N2494 ಕಾರಿನಲ್ಲಿ ಕೇರಳದ ಪಡಿಜ್ಞಾತ ಗ್ರಾಮದ ಕುರಿಯಚ್ಚನ್ ಹಾಗೂ ಸೆಲ್ವಿ ಎಂಬ ದಂಪತಿಗಳು ಕೊಡಗಿನ ಮಂಚಳ್ಳಿ ಗ್ರಾಮಕ್ಕೆ ಬಂದಿದ್ದರು.
ಈ ದಂಪತಿ ಗ್ರಾಮಕ್ಕೆ ಬಂದು ಮತಾಂತರ ಮಾಡುವ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಹಿಂದೂಗಳನ್ನು ಮತಾಂತರ ಮಾಡಲು ಕ್ರೈಸ್ತ ದಂಪತಿ ಯತ್ನಿಸುತ್ತಿದ್ದಾರೆ ಎಂದು ಭಜರಂಗದಳ ಕಾರ್ಯಕರ್ತರು ದಂಪತಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಇಬ್ಬರನ್ನು ಕುಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಕುಟ್ಟ ಪೊಲೀಸರು ದಂಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ‘ಆರೋಪಿಗಳ ವಿರುದ್ಧ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತಾಂತರ ವಿರೋಧಿ ಮಸೂದೆಯ ಹೊಸ ಗೆಜೆಟ್ ಪ್ರತಿ ಇನ್ನೂ ನಮ್ಮನ್ನು ತಲುಪಿಲ್ಲ, ಆದ್ದರಿಂದ, ಆರೋಪಿಗಳ ವಿರುದ್ಧ ಹಳೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ನಾವು ಚಾರ್ಜ್ ಶೀಟ್ ಸಲ್ಲಿಸುವಾಗ, ಹೊಸದಾಗಿ ಅಂಗೀಕರಿಸಿದ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.