ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆಗೆ ವೇಗ ಸಿಕ್ಕಿದೆ. ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆಯಾದ ಬೆನ್ನಲ್ಲೇ ದೆಹಲಿಯಲ್ಲೂ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೀಟು ಹಂಚಿಕೆಯ ನಿರ್ಧಾರ ತೆಗೆದುಕೊಂಡಿವೆ.
ಸೀಟು ಹಂಚಿಕೆ ಸೂತ್ರದ ಪ್ರಕಾರ ದೆಹಲಿಯ ಒಟ್ಟು 7 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಆಮ್ ಆದ್ಮಿ ಪಕ್ಷ 4 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.
2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವಾಗಲೀ, ಕಾಂಗ್ರೆಸ್ ಆಗಲೀ ದೆಹಲಿಯಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರ ಗೆದ್ದಿರಲಿಲ್ಲ. ಎರಡೂ ಲೋಕಸಭಾ ಚುನಾವಣೆಯಲ್ಲಿ ಎಲ್ಲ 7 ಕ್ಷೇತ್ರಗಳನ್ನೂ ಬಿಜೆಪಿಯೇ ಗೆದ್ದುಕೊಂಡಿತ್ತು.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಮೈತ್ರಿಕೂಟದ ಸುಪ್ರೀಂಕೋರ್ಟ್ನಲ್ಲೇ ಗೆದ್ದ ಎರಡು ದಿನದ ಬೆನ್ನಲ್ಲೇ ದೆಹಲಿಗೆ ಸೀಮಿತವಾಗಿ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮವಾಗಿದೆ.
ಆದರೆ ಕೆಲ ದಿನಗಳ ಹಿಂದೆಯಷ್ಟೇ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷ ಸರ್ವೋಚ್ಛ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ನ 13 ಲೋಕಸಭಾ ಕ್ಷೇತ್ರ ಮತ್ತು ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದರು. ಪಂಜಾಬ್ನಲ್ಲಿ ಆಪ್ ಜೊತೆಗೆ ಮೈತ್ರಿಗೆ ಪಂಜಾಬ್ ಕಾಂಗ್ರೆಸ್ ಘಟಕದಿಂದಲೇ ವಿರೋಧ ಇದೆ.
2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಮೋದಿ ಅಲೆಯಲ್ಲಿ ಎಲ್ಲ 7 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಶೇಕಡಾ 46.40ರಷ್ಟು ಮತಗಳನ್ನು ಪಡೆದಿತ್ತು. ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ಬರೋಬ್ಬರೀ ಶೇಕಡಾ 32ರಷ್ಟು ಮತಗಳನ್ನು ಪಡೆದಿತ್ತು. ಕಾಂಗ್ರೆಸ್ನ ಶೇಕಡಾವಾರು ಮತ ಶೇಕಡಾ 42ರಷ್ಟು ಭಾರೀ ಕುಸಿತ ಕಂಡು ಶೇಕಡಾ 15ಕ್ಕೆ ಇಳಿದಿತ್ತು.
2019ರಲ್ಲೂ ಬಿಜೆಪಿಯೇ ಎಲ್ಲ 7 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ ಬಿಜೆಪಿಯ ಶೇಕಡಾವಾರು ಮತ ಶೇಕಡಾ 56.86ಕ್ಕೆ ಭಾರೀ ಏರಿಕೆ ಕಂಡರೆ, ಆಮ್ ಆದ್ಮಿ ಪಕ್ಷದ ಶೇಕಡಾವಾರು ಮತ ಶೇಕಡಾ 14.71ರಷ್ಟು ಕುಸಿದು ಶೇಕಡಾ 18ಕ್ಕೆ ಇಳಿದಿತ್ತು. ಆದರೆ ಕಾಂಗ್ರೆಸ್ನ ಶೇಕಡಾವಾರು ಮತ 7ರಷ್ಟು ಏರಿಕೆಯಾಗಿ ಶೇಕಡಾ 22ಕ್ಕೆ ಜಿಗಿದಿತ್ತು. ಆದರೆ ಈ ಮತ ಹೆಚ್ಚಳ ಕಾಂಗ್ರೆಸ್ಗೆ ಒಂದೇ ಒಂದು ಸೀಟು ಗೆಲ್ಲಿಸಿಕೊಡಲು ಸಾಕಾಗಲಿಲ್ಲ.
2015 ಮತ್ತು 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡೂ ಬಾರಿ ಪ್ರಚಂಡ ಬಹುಮತದೊಂದಿಗೆ ಆಮ್ ಆದ್ಮಿ ಪಕ್ಷವೇ ಅಧಿಕಾರಕ್ಕೆ ಬಂದಿದೆ. 2022ರಲ್ಲಿ ನಡೆದ ದೆಹಲಿ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಮೂರನ್ನೂ ಆಮ್ ಆದ್ಮಿ ಪಕ್ಷವೇ ಗೆದ್ದಿದೆ.