ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ತಮ್ಮ ನೇತೃತ್ವದ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂಬ ವಾಗ್ದಾನವನ್ನು ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ರೈತರ ದಿನದಂದು ನೀಡಿದ್ದಾರೆ. ಅಲ್ಲದೆ ರೈತರ ಮೊಗದಲ್ಲಿ ಸಂತಸ ವಿಚಾರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನಕ್ಕೆ ಕಾಯದೆ, ರೈತರ ಹಿತಕಾಪಾಡುವ ಉದ್ದೇಶದಿಂದ ಸಿದ್ದರಾಮಯ್ಯ ಕೂಡಲೇ ನೆರವು ಘೋಷಿಸಿರೋದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಿ, ಭೂಒಡೆತನದ ಹಕ್ಕನ್ನು ರೈತರಿಗೆ ಒದಗಿಸಿ, ಪ್ರತಿಯೊಬ್ಬ ರೈತನು ಸ್ವಂತ ಭೂಮಿಯಲ್ಲಿ ಶ್ರಮದ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ಮಾಡೋದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನು ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ರೈತರ 4 ಲಕ್ಷ ಕೃಷಿ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ ಮೂಲಕ, ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಅಂತ ಸಿಎಂ ಭರವಸೆ ನೀಡಿದ್ದಾರೆ.
ರೈತರ ಬೆಳೆಗಳಿಗೆ ನೀರು ಒದಗಿಸೋ ಸಲುವಾಗಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡೋದಾಗಿ ತಿಳಿಸಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ಬಂಡವಾಳ ವೆಚ್ಚ ತಗ್ಗಿಸಿ, ಅಧಿಕ ಇಳುವರಿ ರೈತರ ಕೈ ಸೇರುವಂತೆ ಮಾಡುವ ಸಲುವಾಗಿ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹೈ-ಟೆಕ್ ಹಾರ್ವೆಸ್ಟರ್ ಹಬ್ ಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಬರದ ಸಂಕಷ್ಟದ ನಡುವೆಯೂ ರೈತರ ಕೃಷಿ ಪಂಪ್ಸೆಟ್ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡುವ ಮೂಲಕ ನಮ್ಮ ಸರ್ಕಾರವು ನಾಡಿನ ರೈತರ ಹಿತ ಕಾಪಾಡಿದೆ ಅಂತ ತಿಳಿಸೋ ಮೂಲಕ ಸಿಎಂ ಸಿದ್ದರಾಮಯ್ಯ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.