ಹೊಸ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಜೂನ್ 1ರಿಂದ ಅವಕಾಶ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇರಲಿಲ್ಲ ಮತ್ತು ಪಡಿತರ ಚೀಟಿ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಲಾಖೆಯ ವೆಬ್ಸೈಟ್ನಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆಯನ್ನೂ ನಿರ್ಬಂಧಿಸಲಾಗಿತ್ತು.
ಜೂನ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಪ್ರಮುಖ ದಿನಪತ್ರಿಕೆ ಪ್ರಜಾವಾಣಿ ವರದಿ ಮಾಡಿದೆ.
2021ರ ನವೆಂಬರ್ನಲ್ಲಿ 2 ಲಕ್ಷದ 76 ಸಾವಿರ ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ವಿತರಣೆಗೆ ಸರ್ಕಾರ ಮಂಜೂರಾತಿ ನೀಡಿತ್ತು. 2022ರ ನವೆಂಬರ್ನಲ್ಲಿ 1 ಲಕ್ಷದ 55 ಸಾವಿರ ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಅನುಮತಿ ಸಿಕ್ಕಿತ್ತು. ಈಗ ಸಲ್ಲಿಕೆ ಆಗುವ ಅರ್ಜಿಗಳ ಸಂಖ್ಯೆ ಆಧರಿಸಿ ಹೊಸ ಪಡಿತರ ಚೀಟಿ ವಿತರಣೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ.
ಕರ್ನಾಟಕದಲ್ಲಿ 1.3 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, 4 ಕೋಟಿ 30 ಲಕ್ಷ ಮಂದಿ ಬಿಪಿಎಲ್ ವ್ಯಾಪ್ತಿಯಲ್ಲಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಮಾನದಂಡ ಆಗಬಹುದು ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಳವಾಗಿದೆ.
ADVERTISEMENT
ADVERTISEMENT