ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾ ಅವರನ್ನು ಬಂಧಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು ಪೊಲೀಸ್ ವರಿಷ್ಠಾಧಿಕಾರಿಗೆ ಈ ಮುಂಚೆ ಆದೇಶ ನೀಡಿತ್ತು. ವಿಶೇಷ ತಂಡ ರಚಿಸಿ ಮಾಜಿ ಸಂಸದರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿತ್ತು. ಮಂಗಳವಾರ (ಫೆ.27) ನ್ಯಾಯಾಲಯಕ್ಕೆ ಹಾಜರಾಗಲು ಡೇಟ್ ಕೂಡ ನೀಡಿತ್ತು. ನಟಿ ಗೈರಾಗಿದ್ದರಿಂದ ಜಯಪ್ರದಾ ವಿರುದ್ಧ ಸೆಕ್ಷನ್ 82ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ.
ಹಲವಾರು ಬಾರಿ ಜಾಮೀನು ರಹಿತ ವಾರಂಟ್ (ಎನ್ಬಿಡಬ್ಲ್ಯು) ಹೊರಡಿಸಿದ ನಂತರವೂ ಅವರು ಮಂಗಳವಾರ (ಫೆ.27) ಹಾಜರಾಗದಿದ್ದಕ್ಕಾಗಿ ರಾಂಪುರದ ಎಂಪಿ/ಎಂಎಲ್ಎ ನ್ಯಾಯಾಲಯವು ಸಿಆರ್ಪಿಸಿ ಆದೇಶ 82 ಅನ್ನು ಹೊರಡಿಸಿದೆ. ಈ ಕುರಿತು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಅವರು, ಜಯಾ ವಿರುದ್ಧ 2019 ರ ಚುನಾವಣಾ ನೀತಿ ಸಂಹಿತೆ ಪ್ರಕರಣ ರಾಂಪುರದ ನ್ಯಾಯಾಲಯದಲ್ಲಿ ಕೇಮ್ರಿ ಪೊಲೀಸ್ ಠಾಣೆ ಮತ್ತು ಸ್ವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.