ADVERTISEMENT
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯುತ್ನಾಳ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರು ಹೆದರಿದ್ದಾರಾ..?
2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು ಬಸನಗೌಡ ಪಾಟೀಲ್ ಯತ್ನಾಳ್.
ಆದರೆ ಯತ್ನಾಳ್ ಅವರು ಮಂತ್ರಿ ಆಗಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಯತ್ನಾಳ್ ಅವರು ನಿರಂತರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಹಾಗೂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರು ಬಿಜೆಪಿ ನಾಯಕರು (ಮುರುಗೇಶ್ ನಿರಾಣಿ, ಮಾಜಿ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಬಿ ಸಿ ಪಾಟೀಲ್. ರೇಣುಕಾಚಾರ್ಯ) ಹೀಗೆ ಎಲ್ಲರನ್ನೂ ಟಾರ್ಗೆಟ್ ಮಾಡ್ಕೊಂಡು ಬರ್ತಿದ್ದಾರೆ.
ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿತ್ತಾದರೂ ನನಗೆ ನೋಟಿಸ್ ಕೊಟ್ಟೇ ಇಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದ್ದರು.
ಈಗ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗಿದ್ದಾರೆ, ರಾಜಾಹುಲಿ ಮಗ ವಿಜಯೇಂದ್ರ ಕೈಗೆ ಕರ್ನಾಟಕ ಬಿಜೆಪಿ ಚುಕ್ಕಾಣಿ ಸಿಕ್ಕಿದೆ.
ವಿರೋಧ ಪಕ್ಷದ ನಾಯಕ ಸ್ಥಾನ ಮೇಲೆ ಕಣ್ಣಿಟ್ಟಿದ್ದ ಯತ್ನಾಳ್ ಆ ಹುದ್ದೆ ಕೈ ತಪ್ಪಿದ ಬಳಿಕ ಹಾಗೂ ವಿಜಯೇಂದ್ರ ಹೊಸ ರಾಜ್ಯಾಧ್ಯಕ್ಷರಾದ ಬಳಿಕ ಮತ್ತು ವಿಜಯೇಂದ್ರ ಬಿಜೆಪಿಯಲ್ಲೇ ತಮ್ಮ ಹೊಸ ತಂಡವನ್ನು ರಚಿಸಿಕೊಂಡ ಬಳಿಕ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧದ ಆರೋಪಗಳನ್ನು ತೀವ್ರಗೊಳಿಸಿದ್ದಾರೆ.
ಹೀಗಿದ್ದರೂ ವಿಜಯೇಂದ್ರ ಇನ್ನೂ ಯಾಕೆ ಯತ್ನಾಳ್ ವಿರುದ್ಧ ಕ್ರಮಕೈಗೊಂಡಿಲ್ಲ. ಬಿಜೆಪಿಯಲ್ಲೇ ತಾವಷ್ಟೇ ಪವರ್ಫುಲ್ ಎಂದು ತಿರುಗಾಡುತ್ತಿರುವ ವಿಜಯೇಂದ್ರಗೆ ಪಕ್ಷದ ಶಾಸಕರೊಬ್ಬರ ಬಾಯನ್ನು ಯಾಕೆ ಮುಚ್ಚಿಸಲು ಸಾಧ್ಯವಾಗುತ್ತಿಲ್ಲ ಅಥವಾ ಅವರಿಗೆ ನೋಟಿಸ್ ಕೊಟ್ಟು ಉಚ್ಛಾಟನೆ ಮಾಡಲು ಯಾಕೆ ಆಗುತ್ತಿಲ್ಲ.
ಒಂದು ವೇಳೆ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಮುಖ ಹಗರಣಗಳ ಆರೋಪಗಳನ್ನು ಎದುರಿಸಬೇಕಾಗಬಹುದು
1) 543 ಪಿಎಸ್ಐಗಳ ನೇಮಕಾತಿ ಹಗರಣ – ಈ ಹಗರಣದಲ್ಲಿ ವಿಜಯೇಂದ್ರ ಅವರೇ ದೊಡ್ಡ ಕಿಂಗ್ಪಿನ್ ಎಂಬ ಆರೋಪವನ್ನು ಯತ್ನಾಳ್ ಅವರೇ ಮಾಡಿರುವ ಹಿನ್ನೆಲೆಯಲ್ಲಿ ಮತ್ತು ಆ ಬಗ್ಗೆ ಸಾಕ್ಷ್ಯಗಳಿದೆ ಎಂದು ಬಹಿರಂಗವಾಗಿಯೇ ಹೇಳಿರುವ ಹಿನ್ನೆಲೆಯಲ್ಲಿ.
2) ಕೋವಿಡ್ ಸಂಕಷ್ಟದಲ್ಲಿ ರಾಜ್ಯದ ಜನ ಪರದಾಡುತ್ತಿದ್ದಾಗ ಯಡಿಯೂರಪ್ಪ ಸರ್ಕಾರದಲ್ಲಿ 40 ಸಾವಿರ ಕೋಟಿ ರೂಪಾಯಿ ಹಗರಣ ಎಸಗಲಾಗಿದೆ, ಒಂದು ವೇಳೆ ತಮ್ಮನ್ನು ಉಚ್ಛಾಟನೆ ಮಾಡಿದರೆ ದಾಖಲೆ ಬಹಿರಂಗದ ಎಚ್ಚರಿಕೆ ನೀಡಿರುವುದು
3) ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯಡಿಯೂರಪ್ಪ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಆಗಿತ್ತು. ಈ ವೇಳೆ ಬಿಎಂಟಿಸಿ ನೌಕರನ ಬಳಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು ಎಂಬ ಆರೋಪವಿದೆ. ಅವೆಲ್ಲವೂ ಯಡಿಯೂರಪ್ಪ ಕುಟುಂಬದ ಬೇನಾಮಿ ಎನ್ನುವುದು ಯತ್ನಾಳ್ ಅವರ ಗಂಭೀರ ಆರೋಪ.
4) ಸಿಡಿಗಳನ್ನು ತೋರಿಸಿ ಬೆದರಿಸಿಯೇ ನಿರಾಣಿ ಮಂತ್ರಿಯಾದರು ಎಂದು ನೇರವಾಗಿ ಯತ್ನಾಳ್ ಹೇಳಿದ್ದರು. ಈಗಲೂ ಸಿಡಿ ಕುತಂತ್ರದ ಬಗ್ಗೆ ಮಾತಾಡುತ್ತಿದ್ದಾರೆ ಯತ್ನಾಳ್. ಒಂದು ವೇಳೆ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯಾದರೆ ಆ ಸಿಡಿ ರಹಸ್ಯಗಳು ಇನ್ನಷ್ಟು ದೊಡ್ಡದಾಗಿ ಸ್ಫೋಟಗೊಳ್ಳಬಹುದು.
5) ವಿಜಯೇಂದ್ರ ವಿರುದ್ಧ ಒಂದು ವೇಳೆ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ಮಾಹಿತಿಗಳು ಹೊರಬಿದ್ದರೆ ಅದು ವಿಜಯೇಂದ್ರ ರಾಜಕೀಯಕ್ಕೆ ದೊಡ್ಡ ಹೊಡೆತ ಕೊಡಬಹುದು.
6) ಲಿಂಗಾಯತ ಸಮುದಾಯದಲ್ಲೇ ದೊಡ್ಡ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಬಳಿಕ ಯತ್ನಾಳ್ ಪಂಚಮಸಾಲಿ ಸಮುದಾಯದಲ್ಲಿ ನಾಯಕರಾಗಿ ಹೊರಹೊಮ್ಮುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ಯತ್ನಾಳ್ ಅವರನ್ನು ವಿಜಯೇಂದ್ರ ಅವರೇ ಪಕ್ಷದಿಂದ ಉಚ್ಛಾಟನೆ ಮಾಡಿದರೆ ಆಗ ಯತ್ನಾಳ್ ಬಗ್ಗೆ ಪಂಚಮಸಾಲಿ ಸಮಾಜದಲ್ಲಿ ಅನುಕಂಪ ಸೃಷ್ಟಿಯಾಗಿ ಬಿಜೆಪಿಗೆ ಹಿನ್ನಡೆಯಾದರೂ ಅಚ್ಚರಿಯಿಲ್ಲ.
ADVERTISEMENT