ADVERTISEMENT
ಕಾಂಗ್ರೆಸ್ನಿಂದ ಅನರ್ಹರಾಗಿ ಶಾಸಕ ಸ್ಥಾನ ಕಳೆದುಕೊಂಡಿರುವ 6 ಮಂದಿ ಮಾಜಿ ಶಾಸಕರಿಗೆ ಬಿಜೆಪಿ ಹಿಮಾಚಲಪ್ರದೇಶದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿದೆ.
ಅನರ್ಹಗೊಂಡು ಶಾಸಕ ಸ್ಥಾನ ಕಳೆದುಕೊಂಡಿರುವ ಸುಧೀರ್ ಶರ್ಮಾ, ರವಿ ಥಾಕೂರು, ಇಂದರ್ ದತ್ ಲಖನ್ಪಾಲ್, ದೇವೇಂದ್ರ ಭುಟ್ಟೋ, ಚೈತನ್ಯ ಶರ್ಮಾ, ರಾಜಿಂದರ್ ರಾಣಾ ಅವರಿಗೆ ಟಿಕೆಟ್ ನೀಡಿದೆ.
ಲೋಕಸಭಾ ಚುನಾವಣೆ ಜೊತೆಗೆ ಜೂನ್ 1ರಂದು ಈ 6 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಅಭಿಷೇಕ್ ಮನು ಸಿಂಘ್ವಿ ಅವರ ಬದಲಿಗೆ ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿದ್ದರು.
ರಾಜ್ಯಸಭಾ ಮತದಾನದ ಮರು ದಿನ ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ ಸಿಎಂ ಸುಖ್ವಿಂದರ್ ಸಿಂಗ್ ಸುಕು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಜೆಟ್ಗೆ ಅನುಮೋದನೆ ಪಡೆಯುವ ವೇಳೆ ಮತದಾನದಿಂದ ಗೈರಾಗಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದ್ದಾಗಿ ಈ ಆರು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿತ್ತು.
ಈ ಮೂಲಕ ಆಪರೇಷನ್ ಕಮಲದಿಂದ ಸರ್ಕಾರ ಬೀಳುವ ಆತಂಕದಿಂದ ಕಾಂಗ್ರೆಸ್ ಬಚಾವ್ ಆಯ್ತು.
ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆಯಾದರೂ ಅನರ್ಹತೆ ನ್ಯಾಯಾಲಯ ತಡೆ ಕೊಟ್ಟಿಲ್ಲ.
6 ಶಾಸಕರ ಅನರ್ಹತೆಯೊಂದಿಗೆ ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಸುರಕ್ಷಿತವಾಗಿದೆ. 68 ಶಾಸಕ ಬಲದ ವಿಧಾನಸಭೆಯ ಈಗಿನ ಬಲಾಬಲ 62ಕ್ಕೆ ಕುಸಿದಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ 34ಕ್ಕೆ ಇಳಿದಿದೆ. ಈಗ ಬಹುಮತಕ್ಕೆ ಬೇಕಿರುವುದು 32. ಬಿಜೆಪಿ 25 ಶಾಸಕರು ಮತ್ತು 3 ಪಕ್ಷೇತರ ಶಾಸಕರ ಬೆಂಬಲವನ್ನು ಹೊಂದಿದೆ.
ಒಂದು ವೇಳೆ ಈ ಆರೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಆಗ ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬಹುದು.
ADVERTISEMENT