ಭಾರತ ಜೋಡೋ ಯಾತ್ರೆ ವೇಳೆ KGF-2 ಹಾಡಿನ ಕೃತಿಚೌರ್ಯ ಕೇಸ್​ – ಆದೇಶ ಕಾಯ್ದಿರಿಸಿದ ಹೈಕೋರ್ಟ್​

ಭಾರತ್​ ಜೋಡೋ ಯಾತ್ರೆ ವೇಳೆ ಕೆಜಿಎಫ್​​ ಚಾಪ್ಟರ್​-2 ಸಿನಿಮಾದ ಹಾಡನ್ನು ಕೃತಿಚೌರ್ಯ ಮಾಡಿ ಬಳಸಿಕೊಳ್ಳಲಾಗಿದೆ ಎಂಬ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್​ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಕೃತಿ ಚೌರ್ಯ ಸಂಬಂಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ರಾಜ್ಯಸಭಾ ಸಂಸದ ಜೈರಾಂ ರಮೇಶ್​ ಮತ್ತು ಸುಪ್ರಿಯಾ ಶ್ರೀನಾಟೆ ಅವರ ವಿರುದ್ಧ ಬೆಂಗಳೂರಲ್ಲಿ ಕ್ರಿಮಿನಲ್​ ಪ್ರಕರಣ ದಾಖಲಾಗಿತ್ತು.

ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್​ ಪ್ರಕರಣ ರದ್ದುಗೊಳಿಸುವಂತೆ ಕೋರಿ ಈ ಮೂವರು ಕರ್ನಾಟಕ ಹೈಕೋರ್ಟ್​ನಲ್ಲಿ ದಾವೆ ಸಲ್ಲಿಸಿದ್ದರು. ಆ ದಾವೆ ಕುರಿತ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಕಾಯ್ದಿರಿಸಿದೆ.

ಕೃತಿಸ್ವಾಮ್ಯ ಕಾಯ್ದೆಯ ಕಲಂ 63ರಡಿಯಲ್ಲಿ ಒಂದು ವೇಳೆ ಆರೋಪಿತರು ತಿಳಿದು ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೆ ಅದು ಅಪರಾಧವಾಗುತ್ತದೆ. ಅಲ್ಲದೇ ಹಾಡಿನ ಬಳಕೆಯಲ್ಲಿ ಕೃತಿಚೌರ್ಯದ ಉದ್ದೇಶ ಇರಲಿಲ್ಲ. ಜೊತೆಗೆ ಆ ಹಾಡಿನ ಬಳಕೆಯಿಂದ ಯಾವುದೇ ಹಣಕಾಸಿನ ಲಾಭವನ್ನು ಪಡೆದುಕೊಳ್ಳಲಾಗಿಲ್ಲ ಎಂದು ಕಾಂಗ್ರೆಸ್​ ನಾಯಕರ ಪರ ವಕೀಲರು ವಾದಿಸಿದರು.

ಆದರೆ ಎಂಆರ್​ಟಿ ಮ್ಯೂಸಿಕ್​ ಪರವಾಗಿ ವಾದಿಸಿದ ವಕೀಲರು ಒಂದು ವೇಳೆ ಹಾಡಿನ ಬಳಕೆಯಿಂದ ಅರ್ಜಿದಾರರು ಹಣಕಾಸಿನ ಲಾಭವನ್ನು ಗಳಿಸಿಲ್ಲ ಎಂದು ಭಾವಿಸಿದರೂ ಆ ಹಾಡಿನ ಬಳಕೆಯಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುವ ಸಲುವಾಗಿ ಕೆಜಿಎಫ್​ ಹಾಡನ್ನು ಭಾರತ್​ ಜೋಡೋ ಯಾತ್ರೆ ವೇಳೆ ಬಳಸಲಾಯಿತು ಎಂದು ಎಂಆರ್​ಟಿ ಮ್ಯೂಸಿಕ್​ ವಾದಿಸಿತ್ತು.