ADVERTISEMENT
ಗೋವಾದ ಅಪಾರ್ಟ್ಮೆಂಟ್ನಲ್ಲಿ ನಾಲ್ಕು ವರ್ಷದ ಮಗನನ್ನು ಕೊಂದು ಬ್ಯಾಗ್ನಲ್ಲಿ ತುಂಬಿಸಿಕೊಂಡು ಕಾರಿನಲ್ಲಿ ಪ್ರಯಾಣಿಸ್ತಿದ್ದ ಮಹಿಳಾ ಉದ್ಯಮಿಯನ್ನು ಬಂಧಿಸಲಾಗಿದೆ. ಗಂಡನ ಜೊತೆಗಿನ ಸಂಬಂಧ ಹಳಸಿದ್ದೇ ಕೃತ್ಯ ಎಸಗಲು ಕಾರಣ ಎಂಬ ಅನುಮಾನವಿದೆ.
ಬೆಂಗಳೂರಿನ ಮೈಂಡ್ಫುಲ್ ಎಐ ಲ್ಯಾಬ್ ಕಂಪನಿಯ ಸಹ ಸಂಸ್ಥಾಪಕಿ 39 ವರ್ಷದ ಸುಚನಾ ಸೇಠ್ಳನ್ನು ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಹೋಗುತ್ತಿದ್ದಾಗ ಐಮಂಗಲ ಪೊಲೀಸ್ ಠಾಣೆಯನ್ನು ಗಮನಿಸಿದ ಉದ್ಯಮಿ ಪ್ರಯಾಣಿಸ್ತಿದ್ದ ಕಾರಿನ ಚಾಲಕ ಕಾರನ್ನು ಠಾಣೆಗೆ ಬಂದು ನಿಲ್ಲಿಸಿದ. ಈ ವೇಳೆ ಕಾರಿನ ಡಿಕ್ಕಿ ತೆರೆದಾಗ ಸೂಟ್ಕೇಸ್ನಲ್ಲಿ ಮಗನ ಮೃತದೇಹ ಪತ್ತೆಯಾಗಿದೆ.
ಉತ್ತರ ಗೋವಾದ ಸೋಲ್ ಬ್ಯಾನಿಯನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ಗೆ ಶನಿವಾರ ಮಗನೊಂದಿಗೆ ಈಕೆ ಬಂದಿದ್ದಳು. ಸೋಮವಾರ ಅಪಾರ್ಟ್ಮೆಂಟ್ನಿಂದ ಏಕಾಂಗಿಯಾಗಿ ಬಂದಿದ್ದ ಈಕೆ ಆ ಬಳಿಕ ಬಾಡಿಗೆ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹೊರಟ್ಟಿದ್ದಳು. ಈಕೆ ಬೆಂಗಳೂರಿಗೆ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ ಆಗಿದೆ ಎಂದು ಹೇಳಿದರೂ ಕಾರಿನಲ್ಲಿ ಹೋಗಿದ್ದನ್ನು ನೋಡಿ ಅಪಾರ್ಟ್ಮೆಂಟ್ ಸಿಬ್ಬಂದಿಗೆ ಅನುಮಾನ ಕಾಡಿತ್ತು.
ಈ ವೇಳೆ ಆಕೆಯೊಂದಿಗೆ ಬಂದಿದ್ದ ನಾಲ್ಕು ವರ್ಷದ ಮಗ ಕಾಣೆಯಾಗಿರುವುದು ಅಪಾರ್ಟ್ಮೆಂಟ್ ಸಿಬ್ಬಂದಿ ಗಮನಕ್ಕೆ ಬಂತು. ಆಕೆ ತಂಗಿದ್ದ ಅಪಾರ್ಟ್ಮೆಂಟ್ನ್ನು ನೋಡಿ ಪರಿಶೀಲಿಸಿದಾಗ ಅಲ್ಲಿ ರಕ್ತದ ಕಲೆಗಳಿದ್ದವು. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.
ಬಳಿಕ ಗೋವಾ ಪೊಲೀಸರು ಟ್ಯಾಕ್ಸಿ ಡ್ರೈವರ್ನ್ನು ಸಂಪರ್ಕಿಸಿ ಹತ್ತಿರದಲ್ಲೇ ಇರುವ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡುವಂತೆ ಸೂಚಿಸಿದರು. ಅದರಂತೆ ಟ್ಯಾಕ್ಸಿ ಚಾಲಕ ಐಮಂಗಲ ಪೊಲೀಸ್ ಠಾಣೆಗೆ ಬಂದು ಕಾರು ನಿಲ್ಲಿಸಿದ.
ಅಪಾರ್ಟ್ಮೆಂಟ್ನಿಂದ ಹೊರಡುವಾಗ ನಿಮ್ಮ ಮಗ ಎಲ್ಲಿ ಎಂದು ಕೇಳಿದ್ದ ಅಪಾರ್ಟ್ಮೆಂಟ್ ಸಿಬ್ಬಂದಿಗೆ ಅವನು ನನ್ನ ಸ್ನೇಹಿತೆಯ ಜೊತೆಗೆ ಇದ್ದಾನೆ ಎಂದು ಹೇಳಿ ಆಕೆ ಸುಳ್ಳು ವಿಳಾಸ ಕೊಟ್ಟಿದ್ದಳು.
ADVERTISEMENT