ಯುವತಿಯೊಬ್ಬಳು ಬಿಎಂಟಿಸಿ ಬಸ್ನ ಮಹಿಳಾ ಕಂಡಕ್ಟರ್ಗೆ ಹಲ್ಲೆ ನಡೆಸಿದ್ದಾಳೆ (Assault Case) ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ (Free Bus) ನಡೆದಿದೆ. ಮೊನಿಷಾ ಎಂಬಾಕೆ ಬಿಎಂಟಿಸಿ ಕಂಡಕ್ಟರ್ ಸುಕನ್ಯಾ ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ.
ಮತ್ತಿಕೆರೆ ಬಜಾಜ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿರುವ ಮೊನಿಷಾ ಬೆಳಗ್ಗೆ 9:45ಕ್ಕೆ ಬಿಎಂಟಿಸಿ ಬಸ್ ಏರಿದ್ದಾಳೆ. ಈ ವೇಳೆ ಕಂಡಕ್ಟರ್ ಸುಕನ್ಯಾ ಟಿಕೆಟ್ ಕೊಡುವ ಮುನ್ನ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮೊನಿಷಾಳ ಉಗುರು ಸುಕನ್ಯಾರ ಮುಖಕ್ಕೆ ಪರಚಿದೆ. ನಂತರ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ.
ಇತರೆ ಪ್ರಯಾಣಿಕರು ಇವರಿಬ್ಬರ ಕಿತ್ತಾಟವನ್ನು ಬಿಡಿಸಲು ಮುಂದಾದರೂ ಸಾಧ್ಯವಾಗಿಲ್ಲ. ಇಬ್ಬರು ಆರೋಪ-ಪ್ರತ್ಯಾರೋಪವನ್ನು ಮಾಡಿಕೊಂಡಿದ್ದಾರೆ. ಕಂಡಕ್ಟರ್ ಸುಕನ್ಯಾ ಅವರೇ ಮೊದಲು ಹೊಡೆದಿದ್ದು, ಆಕಸ್ಮಿಕವಾಗಿ ಬೆರಳು ಅವರ ಮುಖಕ್ಕೆ ಪರಚಿದೆ ಅಷ್ಟೇ ಎಂದಿದ್ದಾರೆ. ಇತ್ತ ಇವರಿಬ್ಬರ ಜಗಳ ತರಾಕಕ್ಕೇರುತ್ತಿದ್ದಂತೆ ರಸ್ತೆ ಮಧ್ಯೆ ಬಸ್ ನಿಲ್ಲಿಸಲಾಗಿದೆ. ನಂತರ ಸಹ ಪ್ರಯಾಣಿಕರು ಯುವತಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಬಸ್ನಲ್ಲಿದ್ದವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿದ ಕಾರಣಕ್ಕೆ ಕಂಡಕ್ಟರ್ ಸುಕನ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.