BIG BREAKING: ಕರ್ನಾಟಕದ ವಿರುದ್ಧ ಮೋದಿ ದ್ವೇಷ ರಾಜಕೀಯ – ಅನ್ನಭಾಗ್ಯಕ್ಕೆ ಅಕ್ಕಿ ಕೊಡದಂತೆ ಆದೇಶ

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ವಿರುದ್ಧ ದ್ವೇಷ ರಾಜಕೀಯಕ್ಕೆ ಇಳಿದಿದೆ.

ಕರ್ನಾಟಕದಲ್ಲಿ ಜುಲೈನಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುವ 10 ಕೆಜಿ ಅಕ್ಕಿಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ ಅಕ್ಕಿ ಪೂರೈಸಲು ನಿರಾಕರಿಸಿದೆ.

ಈ ಬಗ್ಗೆ ಬೆಂಗಳೂರಿನ ಶಕ್ತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಕೆ ಎಚ್​ ಮುನಿಯಪ್ಪ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​ ಕೆ ಪಾಟೀಲ್​ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ ವಿತರಣೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್​ 6ರಂದು ಕರ್ನಾಟಕ ಸರ್ಕಾರ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿತ್ತು. ಈ ಪತ್ರ ಆಹಾರ ನಿಗಮಕ್ಕೆ ಜೂನ್​ 9ರಂದು ತಲುಪಿತ್ತು.

ಇ-ಹರಾಜು ಇಲ್ಲದೆಯೇ ಈಗಿರುವ OMSS(D) ನಿಯಮದಡಿಯಲ್ಲಿ ಕರ್ನಾಟಕಕ್ಕೆ 13,819 ಮೆಟ್ರಿಕ್​ ಟನ್​ ಅಕ್ಕಿಯನ್ನು ಖರೀದಿಸಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರ ಕೇಳಿತ್ತು.

ಒಪ್ಪಿಕೊಂಡಿದ್ದ ಆಹಾರ ನಿಗಮ:

ಕರ್ನಾಟಕ ಸರ್ಕಾರ ಪತ್ರ ಬರೆದ ಬಳಿಕ ಪ್ರತಿ ಕ್ವಿಂಟಾಲ್​ಗೆ 3,400 ರೂಪಾಯಿಯಂತೆ ಕರ್ನಾಟಕಕ್ಕೆ ನಿಗಮದಿಂದ ಅಕ್ಕಿ ಯನ್ನು ಪೂರೈಸಲು ಆಹಾರ ನಿಗಮ ಅನುಮತಿ ನೀಡಿತ್ತು. ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಕೆ ಮಾಡುವಂತೆ ಜೂನ್​ 12ರಂದು ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭಾಸ್ಕರ್​ ನಾಯಕ್​ ಅವರು ಬೆಂಗಳೂರು, ಹುಬ್ಬಳ್ಳಿ, ರಾಯಚೂರು, ಮೈಸೂರು, ಶಿವಮೊಗ್ಗದಲ್ಲಿರುವ ಆಹಾರ ನಿಗಮದ ವಿಭಾಗೀಯ ಮ್ಯಾನೇಜರ್​ಗಳಿಗೆ ಪತ್ರ ಬರೆದಿದ್ದರು.

ಅಕ್ಕಿ ಪೂರೈಕೆಗೆ ಮೋದಿ ಸರ್ಕಾರದಿಂದ ತಡೆ:

ಕರ್ನಾಟಕ ಬೇಡಿಕೆಯಿಟ್ಟಿದ್ದ ಅಕ್ಕಿ ಪೂರೈಕೆ ಆಹಾರ ನಿಗಮ ಒಪ್ಪಿಕೊಂಡ ಮರು ದಿನವೇ ಕೇಂದ್ರ ಆಹಾರ ಸಚಿವಾಲಯದ ಆಧೀನ ಕಾರ್ಯದರ್ಶಿ ಅವರು ಆಹಾರ ನಿಗಮದ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದರು.

ಆ ಪತ್ರದಲ್ಲಿ OMSS(D) ಅಡಿಯಲ್ಲಿ ರಾಜ್ಯಗಳಿಗೆ ಅಕ್ಕಿ ಪೂರೈಕೆ ನಿಲ್ಲಿಸುವಂತೆ ಆಹಾರ ನಿಗಮಕ್ಕೆ ಸೂಚಿಸಲಾಗಿದೆ. 

ಈ ಮೂಲಕ ಕರ್ನಾಟಕ ಸರ್ಕಾರ ಅನ್ನಭಾಗ್ಯದ ಯೋಜನೆಯಡಿಯಲ್ಲಿ ಜುಲೈ 1ರಿಂದ ನೀಡಲಿರುವ 10 ಕೆಜಿ ಅಕ್ಕಿಗೆ ಅಕ್ಕಿ ಸಿಗದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಪ್ರಧಾನಿ ಮೋದಿ ಸರ್ಕಾರ ಮತ್ತು ಬಿಜೆಪಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.