ಮಹಾಮೈತ್ರಿಕೂಟಕ್ಕೆ ಮೊದಲ ಪರೀಕ್ಷೆ – ಅಂಧೇರಿ ಉಪ ಚುನಾವಣೆ ಸಮೀಕ್ಷೆ

Andheri East Assembly Election
Andheri East Assembly Election

ಮಹಾರಾಷ್ಟ್ರದಲ್ಲಿ (Maharastra) ಶಿವಸೇನೆ-ಎನ್​ಸಿಪಿ ಮತ್ತು ಕಾಂಗ್ರೆಸ್ (Shivasena NCP Congress)​ ನೇತೃತ್ವದ ಮಹಾಮೈತ್ರಿ ಕೂಟ (Maha Vikas Agadi) ಸರ್ಕಾರ ಪತನ ಆದ ಬಳಿಕ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde) ನೇತೃತ್ವದ ಬಾಳಾಸಾಹೇಬ್ (Balasaheb Thackeray) ಶಿವಸೇನೆ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ 4 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಮೊದಲ ಉಪ ಚುನಾವಣೆ ನಡೆಯುತ್ತಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಪಲ್ಲಟಗಳು ಘಟಿಸಿದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಆಗಿರುವ ಕಾರಣ ಎರಡೂ ಕೂಟಗಳಿಗೂ ಅಂಧೇರಿ ಪೂರ್ವ (Andheri East Assembly By Election) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ.

ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಹಿನ್ನೆಲೆ:

ನವೆಂಬರ್​ 3ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಈ ಕ್ಷೇತ್ರದಲ್ಲಿ 2014 ಮತ್ತು 2019ರ ಎರಡೂ ಚುನಾವಣೆಯಲ್ಲೂ ಶಿವಸೇನೆ ಗೆದ್ದಿತ್ತು.

ಇದೇ ಮೇನಲ್ಲಿ ನಿಧನರಾದ ರಮೇಶ್​ ಲಟ್ಕೆ ಶಿವಸೇನೆ ಶಾಸಕರಾಗಿ 2014ರಲ್ಲಿ 5 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಬಂದಿದ್ದರು. 2014ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರದ ಕಾರಣ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನಿಲ್​ ಯಾದವ್​ 47,338 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ಆದರೆ 2019ರಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಶಿವಸೇನೆಗೆ ಬಿಟ್ಟುಕೊಡಬೇಕಾಯಿತು.

2019ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ್ದ ರಮೇಶ್​ ಲಟ್ಕೆ (Ramesh Latke) 17 ಸಾವಿರ ಮತಗಳಿಂದ ಗೆದ್ದರು. ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದ ಮುರ್ಜಿ  ಪಟೇಲ್ (Murji Patel alias Kaka)​ 45 ಸಾವಿರ ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​​ನ ಅಮಿನ್​​ ಜಗದೀಶ್​ ಕುಟ್ಟಿ (Amin Jagadish Kutty) 27 ಸಾವಿರ ಮತಗಳನ್ನು ಪಡೆದಿದ್ದರು.

ದಕ್ಷಿಣ ಕನ್ನಡ ಮೂಲದ ಸುರೇಶ್​ ಶೆಟ್ಟಿ (Suresh Shetty) ಅವರು ಮೂರು ಬಾರಿ ಅಂದರೆ 2009ರವರೆಗೆ ಈ ಕ್ಷೇತ್ರದಿಂದ ಗೆದ್ದು ಬಂದಿದ್ದರು.

ಅಭ್ಯರ್ಥಿಗಳು ಯಾರು..?

ಶಿವಸೇನೆ ಉದ್ಧವ್​ ಠಾಕ್ರೆ (Udhav Thackeray) ಬಣ ಈ ಬಾರಿ ದಿವಂಗತ ಶಾಸಕ ರಮೇಶ್​ ಲಟ್ಕೆ ಅವರ ಪತ್ನಿ ರುತುಜಾ ಲಟ್ಕೆ (Rutuja Latke) ಅವರಿಗೆ ಟಿಕೆಟ್​ ನೀಡುತ್ತಿದೆ.

ಬಿಜೆಪಿ ಈ ಬಾರಿ 2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುರ್ಜಿ ಪಟೇಲ್​ ಅವರಿಗೆ ಟಿಕೆಟ್​ ನೀಡುತ್ತಿದೆ.

ಏಕನಾಥ್​ ಶಿಂಧೆ ಬಣ ಬಿಜೆಪಿ ಜೊತೆಗೆ ಸಖ್ಯ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಏಕನಾಥ್​ ಶಿಂಧೆ ಬಣ ಸ್ಪರ್ಧೆ ಮಾಡುತ್ತಿಲ್ಲ.

ಮತ ಲೆಕ್ಕಾಚಾರ:

ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರಗಳಲ್ಲಿ ಮಠಾರಿಗರನ್ನು ಹೊರತುಪಡಿಸಿದರೆ ಉತ್ತರ ಭಾರತೀಯರು, ಗುಜರಾತಿಗಳು ಮತ್ತು ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಿದೆ.

ಮೈತ್ರಿ ಸಮೀಕರಣ:

ಈ ಕ್ಷೇತ್ರದಲ್ಲಿ ಈ ಬಾರಿ ಶಿವಸೇನೆಗೆ ಕಾಂಗ್ರೆಸ್​ ಮತ್ತು ಎನ್​ಸಿಪಿ ಬೆಂಬಲ ಘೋಷಿಸಿವೆ. ಹೀಗಾಗಿ ಕಾಂಗ್ರೆಸ್​ ನಿಷ್ಠ ಮತಗಳು ಉದ್ಧವ್​ ಠಾಕ್ರೆ ಬಣದ ಅಭ್ಯರ್ಥಿಗೆ ಹೋಗಬಹುದು. 2014ರಲ್ಲಿ ಬಿಜೆಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ಚುನಾವಣೆ ಸ್ಪರ್ಧಿಸಿದ್ದಾಗಲೂ ಶಿವಸೇನೆ ಗೆದ್ದಿರುವ ಹಿನ್ನೆಲೆಯಲ್ಲಿ ಶಿವಸೇನೆಗೆ ಈ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಇದೆ.

ಬಿಜೆಪಿಯೂ 2014ರಲ್ಲಿ ಈ ಕ್ಷೇತ್ರದಲ್ಲಿ 47 ಸಾವಿರ ಮತಗಳನ್ನು ಪಡೆದಿತ್ತು. ಈ ಬಾರಿ ಪಕ್ಷೇತರ ಅಭ್ಯರ್ಥಿಗೆ ಟಿಕೆಟ್​ ನೀಡುವುದರ ಜೊತೆಗೆ ಶಿವಸೇನೆ ಇಬ್ಭಾಗ ಆಗಿರುವುದರಿಂದ ಶಿವಸೇನೆಯ ಮತಗಳು ವಿಭಜನೆ ಆಗಿ ಬಿಜೆಪಿಗೆ ಬರಬಹುದು ಎನ್ನವುದು ಬಿಜೆಪಿ ಲೆಕ್ಕಾಚಾರ.

ಪ್ರತಿಷ್ಠೆ ಯಾಕೆ..?

1. ಮಹಾಮೈತ್ರಿ ಕೂಟ ಸರ್ಕಾರ ಬಿದ್ದ ಬಳಿಕ, ಏಕನಾಥ್​ ಶಿಂಧೆ ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಉಪ ಚುನಾವಣೆ. ಹೀಗಾಗಿ ಪಂಚಾಯತ್​ ಚುನಾವಣೆಗಳ ಬಳಿಕ ಮೊದಲ ವಿಧಾಸಭಾ ಚುನಾವಣಾ ತೀರ್ಪು ಇದಾಗಲಿದೆ.

2. ಯಾರದ್ದು ನಿಜವಾದ ಶಿವಸೇನೆ ಎಂಬ ಬಗ್ಗೆ ಮತದಾರರು ತಮ್ಮ ಮೊದಲ ಉತ್ತರ ನೀಡಲಿದ್ದಾರೆ. ಶಿವಸೇನೆಯ ಮೂಲ ಚಿಹ್ನೆಯನ್ನು ಬಳಸದಂತೆ ಏಕನಾಥ್​ ಶಿಂಧೆ ಮತ್ತು ಉದ್ಧವ್​ ಠಾಕ್ರೆ ಬಣಕ್ಕೆ ಸೂಚಿಸಿರುವ ಚುನಾವಣಾ ಆಯೋಗ ಏಕನಾಥ್​ ಶಿಂಧೆ ಬಣಕ್ಕೆ ಬಾಳಾಸಾಹೇಬ್​ ಶಿವಸೇನೆ ಎಂದೂ ಉದ್ಧವ್​ ಠಾಕ್ರೆ ಬಣಕ್ಕೆ ಶಿವಸೇನೆ ಉದ್ಧವ್​ ಠಾಕ್ರೆ ಬಣ ಎಂದೂ ಪ್ರತ್ಯೇಕವಾಗಿ ನಾಮಕರಣ ಮಾಡಿದೆ. ಉದ್ಧವ್​ ಠಾಕ್ರೆ ಬಣಕ್ಕೆ ಪಂಜು ಚಿಹ್ನೆಯನ್ನು ನೀಡಲಾಗಿದೆ. ಹೀಗಾಗಿ ಬಾಳಾಸಾಹೇಬ್​ ಠಾಕ್ರೆ ಅವರ ನಿಜವಾದ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಮೊದಲ ತೀರ್ಪು.

3. ಉದ್ಧವ್​ ಠಾಕ್ರೆ ಮತ್ತು ಏಕನಾಥ್​ ಶಿಂಧೆ ಇಬ್ಬರ ವೈಯಕ್ತಿಕ ವರ್ಚಸ್ಸಿನ ನಿರ್ಧಾರ.

4. ಮುಂಬೈನಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯ ಮೇಲೂ ಪರಿಣಾಮ. ಆಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

5. ಸರ್ಕಾರ ರಚನೆಗಾಗಿ ಶಿವಸೇನೆಯನ್ನೇ ಇಬ್ಭಾಗ ಮಾಡಿದ್ದ ಬಿಜೆಪಿ ಈಗ ಶಿವಸೇನೆ 2 ಬಾರಿ ಗೆದ್ದಿದ್ದ ಕ್ಷೇತ್ರವನ್ನು ಕಸಿದುಕೊಳ್ಳುವ ಲೆಕ್ಕಾಚಾರದಲ್ಲಿದೆ.

ಸದ್ಯದ ಸನ್ನಿವೇಶ:

ಸದ್ಯಕ್ಕೆ ಚುನಾವಣಾ ವಿಶ್ಲೇಷಕರ ಪ್ರಕಾರ ಈ ಕ್ಷೇತ್ರದಲ್ಲಿ ಉದ್ಧವ್​ ಠಾಕ್ರೆ ಶಿವಸೇನೆಗೆ ಮೇಲುಗೈ ಇದೆ.