ಕ್ರಿಸ್ ಮಸ್ ಡಿನ್ನರ್ ಪಾರ್ಟಿಯಲ್ಲಿ ಭೋಜನ ಸೇವಿಸಿ ಖಾಸಗಿ ಸಂಸ್ಥೆಯೊಂದರ 700ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಫ್ರ್ಯಾನ್ಸ್ ನಲ್ಲಿ ವರದಿಯಾಗಿದೆ.
ಏರ್ ಬಸ್ ಅಟ್ಲಾಂಟಿಕ್ ಸಂಸ್ಥೆಯು ನಿನ್ನೆಯೇ ಕ್ರಿಸ್ ಮಸ್ ಹಬ್ಬದ ಅಂಗವಾಗಿ ತನ್ನ ಸಂಸ್ಥೆಯ ಸಿಬ್ಬಂದಿಗೆ ಪಶ್ಚಿಮ ಫ್ರ್ಯಾನ್ಸ್ ನ ರೆಸ್ಟೋರಂಟ್ ಒಂದರಲ್ಲಿ ಡಿನ್ನರ್ ಪಾರ್ಟಿ ಏರ್ಪಡಿಸಿತ್ತು. ಪಾರ್ಟಿಯಲ್ಲಿ ಭೋಜನ ಸೇವಿಸಿದ ಸುಮಾರು 700 ಮಂದಿಗೆ ಸಹಿಸಲಾರದ ರೀತಿಯಲ್ಲಿ ತೀವ್ರ ತಲೆ ನೋವು ಮತ್ತು ಕೆಲವರಿಗೆ ವಾಂತಿ, ಬೇದಿ ಕಾಣಿಸಿಕೊಂಡಿದೆ.
ಇನ್ನು ಸಂಸ್ಥೆಯು ತನ್ನ ಒಟ್ಟು 2600 ಮಂದಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಭೋಜನವನ್ನು ಸಂಸ್ಥೆಯ ಕ್ಯಾಂಟೀನ್ ನಲ್ಲಿಯೇ ತಯಾರಿಸಲಾಗಿತ್ತು. ಭೋಜನ ಕೂಟದಲ್ಲಿ ಸೀ ಫುಡ್, ಮಾಂಸಾಹಾರ, ಐಸ್ ಕ್ರೀಮ್, ಡೆಸರ್ಟ್ಸ್, ಚಾಕಲೇಟ್ ಸೇರಿದಂತೆ ಮತ್ತಿತರ ತನಿಸುಗಳನ್ನು ತಯಾರಿಸಲಾಗಿತ್ತು. ಇನ್ನು ಭೋಜನ ಸೇವಿಸಿದ ಸುಮಾರು 700 ಮಂದಿಗೆ 24 ಗಂಟೆಯ ಅವಧಿಯಲ್ಲಿ ತೀವ್ರ ತರನಾದ ತಲೆ ನೋವು ಕಾಣಿಸಿಕೊಂಡಿದೆ. ಇನ್ನು ಪ್ರಾಥಮಿಕ ವರದಿಯ ಪ್ರಕಾರ ಆಹಾರ ಪದಾರ್ಥದಲ್ಲಿದ್ದ ಬ್ಯಾಕ್ಟೀರಿಯಾ ಆಹಾರ ಸೇವನೆ ಮಾಡಿದವರ ಹೊಟ್ಟೆ ಸೇರಿ ಈ ಅಸ್ವಸ್ಥತೆ ಉಂಟು ಮಾಡಿದೆ ಎನ್ನಲಾಗಿದೆ.
ಇನ್ನು ಈ ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.