ಗುಜರಾತ್ನಲ್ಲಿ ಹಲವು ದಿನಗಳಿಂದ ಮಳೆ ಸುರಿಯುತ್ತಿದೆ. ಹೀಗಾಗಿ ಗುಜರಾತ್ನ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಇಂದೇ ದಿನದಲ್ಲಿ ಮಳೆ ನೀರಿನಿಂದಾಗಿ ಗುಜರಾತ್ನಲ್ಲಿ 7 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಮಳೆಯಿಂದಾಗಿ ಗುಜರಾತ್ನಾದ್ಯಂತ ನದಿಗಳು ತುಂಬಿ ಹರಿಯುತ್ತಿವೆ, ಆಣೆಕಟ್ಟುಗಳು ಪೂರ್ಣ ಪ್ರಮಾಣದಲ್ಲಿ ತುಂಬಿವೆ ಹಾಗೂ ರಸ್ತೆಗಳಲ್ಲಿ ನೀರು ಹರಿಯುತ್ತಿವೆ. ಮಂಗಳವಾರ ಜುಲೈ 12 ರಿಂದ ಮುಂದಿನ 5 ದಿನಗಳ ವರೆಗೆ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಸಂಬಂಧಿತ ಅಪಘಾತಗಳಿಂದಾಗಿ ಗಿಜರಾತ್ನಲ್ಲಿ 24 ಗಂಟೆಗಳಲ್ಲಿ 7 ಜನ ಸಾವನ್ನಪ್ಪಿದ್ದಾರೆ. ಜೂನ್ 1 ರಿಂದ 63 ಜನ ಸಾವನ್ನಪ್ಪಿದ್ದಾರೆ. 9 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. 468 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ಹೇಳಿಕೆ ನೀಡಿದ್ದಾರೆ.
ಗುಜರಾತ್ ನ ಪ್ರಮುಖ ನಗರ ಅಹ್ಮದಾಬಾದ್ ನಗರದಲ್ಲಿ ಭಾನುವಾರ ರಾತ್ರಿ 219 ಮಿ.ಮೀ ಮಳೆ ಸುರಿದಿದೆ. ಇದರಿಂದಾಗಿ ನಗರದಾಧ್ಯಂತ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಶಾಲಾ-ಕಾಲೇಜುಗಳು, ರಸ್ತೆಗಳು ನೀರಿನಿಂದ ತುಂಬಿಕೊಂಡಿವೆ.
ಕೇಂದ್ರದಿಂದ ಗುಜರಾತ್ಗೆ ಎಲ್ಲಾ ರೀತಿಯ ಸಾಧ್ಯವಾಗುವ ನೆರವು ನೀಡಲಾಗುವುದು. ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹ ಪರಿಸ್ಥಿತಿಯ ಕುರಿತು ವಿಚಾರಿಸಿ, ಸಾಧ್ಯವಾಗುವ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.