ವಿವಿಧ ಕ್ಷೇತ್ರದ 67 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: 67ನೇ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 67 ಗಣ್ಯರನ್ನು ಹಾಗೂ 10 ಸಂಘ ಸಂಸ್ಥೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ ೬೭ ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅದಲ್ಲದೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 1೦ ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿ ಪ್ರಶಸ್ತಿ ಪ್ರಕಟ ಮಾಡಿದೆ.

ಇಸ್ರೋ ಮಾಜಿ ನಿರ್ದೇಶಕ ಶಿವನ್‌, ಹಿರಿಯ ಸಾಹಿತಿ ಅ.ರಾ.ಮಿತ್ರ, ಪ್ರೊ.ಕೃಷ್ಣೇಗೌಡ, ಇಂಗ್ಲೀಷ್‌ ಕಡಲ್ಗಾಲುವೆ ಈಜಿದ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್‌, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌, ಸೋಲಿಗ ಸಮುದಾಯದಲ್ಲಿ ಸಹಕಾರದ ಬೆಳಕು ಚೆಲ್ಲಿದ ಸೋಲಿಗರ ಮಾದಮ್ಮ, ವನಸಂರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟ ರಾಮನಗರದ ಸಾಲುಮರದ ನಿಂಗಣ್ಣ, ಹಿರಿಯ ಚಲನಚಿತ್ರನಟರಾದ ದತ್ತಣ್ಣ, ಅವಿನಾಶ್‌, ಪೌರ ಸೇನಾನಿ ಶ್ರೀಮತಿ ಮಲ್ಲಮ್ಮ, ಉಡುಪಿ ಜಿಲ್ಲೆಯ ದೈವನರ್ತಕ ಗುಡ್ಡ ಪಾಣಾರ, ಕಿರುತೆರೆ ನಟ ಸಿಹಿಕಹಿ ಚಂದ್ರು, ಯಕ್ಷಗಾನ ಕಲಾವಿದರಾದ ಡಾ. ಎಂ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ವೀರಗಾಸೆ ಕಲಾವಿದ ಹಾವೇರಿಯ ಮಹೇಶ್ವರ ಗೌಡ ಲಿಂಗದಹಳ್ಳಿ, ಕಮಲಮ್ಮ ಸೂಲಗಿತ್ತಿ, ಹಿರಿಯ ಸಂಗೀತ ವಿದ್ವಾಂಸ ಅನಂತಾಚಾರ್ಯ ಬಾಳಾಚಾರ್ಯ, ಹಿರಿಯ ಪತ್ರಕರ್ತರಾದ ಎಚ್.ಆರ್. ಶ್ರೀಶ, ಜಿ.ಎಂ.ಶಿರಹಟ್ಟಿ, ಹಿರಿಯ ಸಂಶೋಧಕ ಡಾ.ಎಂ.ಜಿ.ನಾಗರಾಜ್‌ ಸೇರಿದಂತೆ 67 ಜನರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹತ್ತು ಸಮಾಜ ಸೇವಾ ಸಂಘಟನೆಗಳನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೈಸೂರಿನ ರಾಮಕೃಷ್ಣ ಆಶ್ರಮ, ಬೆಂಗಳೂರಿನ ಅಮೃತ ಶಿಶು ನಿವಾಸ, ಸುಮನಾ ಪೌಂಡೇಶನ್‌, ಹಾವೇರಿಯ ಅಗಡಿ ಫಾರ್ಮ್ಸ್‌ , ಗದಗ ಜಿಲ್ಲೆಯ ಲಿಂಗಾಯತ ಪ್ರಗತಿಶೀಲ ಸಂಸ್ಥೆ ಸೇರಿದಂತೆ ಹತ್ತು ಸಾಮಾಜಿಕ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here