ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಶವ ಪತ್ತೆ

ದಾವಣಗೆರೆ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿಯ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಚಂದ್ರಶೇಖರ್ ಕಾರು ಪತ್ತೆಯಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಕೂಡ ಪತ್ತೆಯಾಗಿದೆ.

ಭದ್ರಾ ಮೇಲ್ದಂಡೆ ಕಾಲುವೆಗೆ ಕಾರು ಬಿದ್ದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಲುವೆಯಲ್ಲಿ ಶೋಧ ಮಾಡಿದಾಗ ಬಿಳಿ ಬಣ್ಣದ ಕ್ರೇಟಾ ಕಾರು ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ವೇಳೆ ಶಾಸಕ ರೇಣುಕಾಚಾರ್ಯ, ಪೊಲೀಸರು ಸೇರಿದಂತೆ ನೂರಾರು ಜನರು ಕಾಲುವೆ ಬಳಿ ಜಮಾಯಿಸಿದ್ದರು.

ಸಹೋದರನ ಪುತ್ರನ ಕೊಳೆತ ಮೃತದೇಹ ನೋಡಿ ಶಾಸಕ ರೇಣುಕಾಚಾರ್ಯ ಗೋಳಾಡಿದ ಘಟನೆ ನಡೆಯಿತು.

ಚಂದ್ರಶೇಖರ್‌ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಸಿಕ್ಕಿದೆ. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರಿನಲ್ಲೇ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಪತ್ತೆಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಮೇಲೆತ್ತಿದ್ದಾರೆ.

ಕಾರಿನ ಹಿಂಬದಿ ಸೀಟ್ ನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. ಚಂದ್ರು ತೆಗೆದುಕೊಂಡು ಹೋಗಿದ್ದ KA 17 MA 2534 ನಂಬರಿನ ವೈಟ್ ಕ್ರೇಟಾ ಕಾರು ಭಾನುವಾರ ಮಧ್ಯರಾತ್ರಿ ಶಿವಮೊಗ್ಗದಿಂದ ಸುರಹೊನ್ನೆ ಬಳಿ ಪಾಸ್ ಆಗಿತ್ತು.

ಬಳಿಕ ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ಕಾರು ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆ ಬಳಿ ಸಂಚರಿಸಿರುವ ಕುರುಹು ಪತ್ತೆಯಾಗಿತ್ತು. ಇದೀಗ ಕಾರು ಕಾಲುವೆಯಲ್ಲಿ ಬಿದ್ದಿದೆ. ಕಾರಿನಲ್ಲಿ ಚಂದ್ರಶೇಖರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.