ಮಿದುಳು ನಿಷ್ಕ್ರಿಯಗೊಂಡ 51 ವರ್ಷದ ವ್ಯಕ್ತಿಯೊಬ್ಬರು ಆರು ಮಂದಿಗೆ ತನ್ನ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ನಾಲ್ವರ ಜೀವ ಉಳಿಸಿ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಬೆಳಗಾವಿಯ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ ಎಂಬುವವರ ಮಿದುಳು ನಿಷ್ಕ್ರಿಯಗೊಂಡಿತ್ತು. ಮಂಗಳವಾರ ತಡರಾತ್ರಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಸಹೋದರರು, ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ವ್ಯಕ್ತಿ ನೀಡುವ ಅಂಗಾಂಗಳಿಂದ ಮತ್ತೊಬ್ಬರ ಜೀವ ಉಳಿಯುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಈ ವೇಳೆ ಕುಟುಂಬಸ್ಥರು ಸ್ವಇಚ್ಛೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು. ಬಳಿಕ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಕಸಿ ಮಾಡುವಲ್ಲಿ ಇಲ್ಲಿನ ವೈದ್ಯರು ಮುಂದಾದರು.
ಇನ್ನೂ ಲಿವರ್ ಅನ್ನು ಸಾಂಬ್ರಾ ವಿಮಾನ ನಿಲ್ದಾಣದವರಗೆ ರಸ್ತೆ ಮೂಲಕ ಝೀರೋ ಟ್ರಾಫಿಕ್ನಲ್ಲಿ ತೆರಳಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಯಿತು. ಇದಲ್ಲದೇ ಕಿಡ್ನಿಗಳನ್ನು ಹುಬ್ಬಳ್ಳಿಯ ತತ್ವಾದರ್ಶ ಹಾಗೂ ಎಸ್ ಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಚರ್ಮ ಹಾಗೂ ಕಣ್ಣುಗಳನ್ನು ದಾನ ಮಾಡಿದರು. ಕಣ್ಣುಗಳನ್ನು ಇಬ್ಬರು ಅಂಧರಿಗೆ ಕಸಿ ಮಾಡಲಾಗುತ್ತದೆ. ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಕುಟುಂಬವು ಸದಾ ಜನರ ಕಷ್ಟಕ್ಕೆ ಸ್ಪಂಧಿಸುವಲ್ಲಿ ಮುಂದಡಿ ಇರುತ್ತಿತ್ತು. ಉಮೇಶ ಮೃತಪಟ್ಟರೂ ಕೂಡ 4 ಜನರ ಜೀವ ಉಳಿಸಿದ ಸಾರ್ಥಕತೆ ಉಮೇಶ ಅವರದ್ದಾಗಿದೆ.