ಮಲಯಾಳಂ ಸುದ್ದಿ ವಾಹಿನಿ ‘ಮೀಡಿಯಾ ಒನ್’ನ ಖಾಸಗಿ ದೂರದರ್ಶನ ವಾಹಿನಿಗೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಇಂದು ಮಂಗಳವಾರ ತಡೆ ನೀಡಿದೆ.
ಮೀಡಿಯಾ ಒನ್ ಚಾನೆಲ್ನ ಪ್ರಸಾರ ಪರವಾನಗಿಯನ್ನು ನವೀಕರಿಸದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಎತ್ತಿ ಹಿಡಿಯುವ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ವಾಹಿನಿ ಸಲ್ಲಿಸಿದ್ದ ವಿಶೇಷ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ವಾಹಿನಿಯಿಂದ ಭದ್ರತೆಯ ಬಗ್ಗೆ ಗೃಹ ಸಚಿವಾಲಯವು ಕೋರ್ಟ್ನಲ್ಲಿ ಕಳವಳ ವ್ಯಕ್ತಪಡಿಸಿತು. ಅನಂತರ ಗೃಹ ಸಚಿವಾಲಯದ ಖಡತಗಳನ್ನು ಅರ್ಜಿದಾರರೊಂದಿಗೆ ಹಂಚಿಕೊಳ್ಳದೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರಿದ್ದ ನ್ಯಾಯಪೀಠ ಪರಿಶೀಲಿಸಿ ವಾಹಿನಿ ಕಾರ್ಯನಿರ್ವಹಿಸಲು ಅನುಮತಿ ನೀಡಿ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.