ಮರಗಳ್ಳರ ವಿರುದ್ಧ ಕ್ರಮ ತೆಗೆದುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ವಿರುದ್ಧ ಬೆಳ್ತಂಗಡಿ ಶಾಸಕ
ಹರೀಶ್ ಪೂಂಜಾ ದ್ವೇಷ ಸಾಧಿಸಿ, ವರ್ಗ ಮಾಡಿಸಿದ ಆರೋಪ ಕೇಳಿ ಬಂದಿದೆ.
ಶಾಸಕರು ಮರಗಳ್ಳರಿಗೆ ಬೆಂಬಲಿಸಿ ದ್ವೇಷದಿಂದ ವರ್ಗ ಮಾಡಿಸಿದ್ದಾರೆ ಎಂದು ಸ್ವತಃ ಸಂಧ್ಯಾ ಸಚಿನ್ ಆರೋಪ ಮಾಡಿದ್ದಾರೆ. ಬಿಲ್ಲವ ಸಮಾಜದವರಾದ ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಬೆಳ್ತಂಗಡಿಯ ಗುರು ನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಸಂಧ್ಯಾ ಸಚಿನ್ ಪತ್ರ ಬರೆದಿದ್ದಾರೆ.
ವೈಯಕ್ತಿಕ ದ್ವೇಷದಿಂದ ಮಾಡಿಸಿರುವ ವರ್ಗಾವಣೆ ಏಕಪಕ್ಷೀಯ ಆದೇಶವಾಗಿದೆ ಎಂದು ನೊಂದ ಅಧಿಕಾರಿ ಆರೋಪ ಮಾಡಿದ್ದಾರೆ.
ಪ್ರಭಾರ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ರನ್ನು ದಕ್ಷಿಣ ಕನ್ನಡದಿಂದ ಬೀದರ್ ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಹರೀಶ್ ಪೂಂಜಾ ಪತ್ರ ಬರೆದಿದ್ದರು. ಹರೀಶ್ ಪೂಂಜಾ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆಯ ಸಹಿ ಹಾಕಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಾಸಕ ಹರೀಶ್ ಪೂಂಜಾ ಪತ್ರ ವೈರಲ್ ಆಗುತ್ತಿದ್ದಂತೆ, ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.