ಮಂಗಳೂರು: ವಿಮಾನ ನಿಲ್ದಾಣದಲ್ಲಿ 2ಕೆಜಿಗೂ ಹೆಚ್ಚು ಅಕ್ರಮ ಚಿನ್ನ ಸಾಗಾಟ ಪತ್ತೆ

ಮಂಗಳೂರು: ಕಳೆದ ಒಂಬತ್ತು ದಿನಗಳ ಅವಧಿಯಲ್ಲಿ ನಗರದ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ಅಧಿಕಾರಿಗಳು ಒಂದು ಕೋಟಿಗೂ ಹೆಚ್ಚು ಮೌಲ್ಯದ 2,870 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಅ. 22ರಿಂದ ಅ. 31ರ ಅವಧಿಯಲ್ಲಿ ದುಬೈಯಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನವನ್ನು ಆರು ಮಂದಿ ಪ್ರಯಾಣಿಕರು ಪೇಸ್ಟ್, ಪೌಡರ್ ರೂಪಕ್ಕೆ ಪರಿವರ್ತಿಸಿ ಬನಿಯನ್, ಜೀನ್ಸ್ ಪ್ಯಾಂಟ್, ಶೂಗಳು ಮತ್ತು ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದು, ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಅವರಿಂದ 1,46,87,410 ರೂ. ಮೌಲ್ಯದ 2 ಕೆಜಿಗಿಂತಲೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಅ. 8ರಿಂದ 21ರ ನಡುವಿನ ಅವಧಿಯಲ್ಲಿ ಒಟ್ಟು 5 ಮಂದಿ ಪ್ರಯಾಣಿರಿಂದ ದುಬೈಯಿಂದ ಸಾಗಾಟ ಮಾಡುತ್ತಿದ್ದ 1.59 ಕೋ.ರೂ. ಮೌಲ್ಯದ ಹಾಗೂ ಅ. 6ರಂದು 38.53 ಲ.ರೂ. ಮೌಲ್ಯದ ಅಕ್ರಮ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು.