ಲಂಡನ್: ಬೃಹತ್ ಆರ್ಥಿಕ ಬಿಕ್ಕಟ್ಟಿನ ನಡುವೆ ಯುಕೆ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಕೇವಲ 45 ದಿನಗಳ ಕಾಲ ಬ್ರಿಟನ್ ಪ್ರಧಾನಿಯಾಗಿ ಆಡಳಿತ ನಡೆಸಿ ರಾಜೀನಾಮೆ ನೀಡಿದ್ದಾರೆ.
ಲಿಜ್ ಟ್ರಸ್ ವಿರುದ್ಧ ಯುಕೆ ಸಂಸದರು ಭಾರಿ ವಿರೋಧ ವ್ಯಕ್ತಪಡಿಸಿದ್ದರು, ಅವರ ವಿರುದ್ಧ ಮತ ಸಂಗ್ರಹ ನಡೆಯುತ್ತಿತ್ತು ಎಂಬ ವರದಿಗಳ ನಡುವೆಯೇ ಅವರು ರಾಜೀನಾಮೆ ನೀಡಿದ್ದಾರೆ.
ಲಿಜ್ ಟ್ರಸ್ ಅವರ ಆರ್ಥಿಕ ನೀತಿಗೆ ಬ್ರಿಟನ್ ತತ್ತರಿಸಿತು. ಹಣದುಬ್ಬರ ತೀವ್ರ ಹೆಚ್ಚಾಗಿತ್ತು. ಇದು ಕನ್ಸರ್ವೇಟಿವ್ ಪಕ್ಷದ ಸಂಸದರ ಆಕ್ರೋಶಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ.
ರಾಜೀನಾಮೆ ಬಗ್ಗೆ ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದ ಲಿಜ್ ಟ್ರಸ್, “ಪರಿಸ್ಥಿತಿಯನ್ನು ಗಮನಿಸಿದರೆ, ನಾನು ಚುನಾಯಿತನಾದ ಜನಾದೇಶವನ್ನು ನಿರ್ವಹಿಸಲು ಸಾಧ್ಯವಿಲ್ಲ . ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೂ ನಾನು ಪ್ರಧಾನಿಯಾಗಿಯೇ ಇರುತ್ತೇನೆ” ಎಂದು ಹೇಳಿದ್ದಾರೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿಯಾಗಿ 6 ವಾರಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದು, ಕೇವಲ 45 ದಿನಗಳ ಕಾಲ ಯುಕೆ ಪ್ರಧಾನಿಯಾಗುವ ಮೂಲಕ ಅತಿ ಕಡಿಮೆ ಅವಧಿಗೆ ಯುನೈಟೆಡ್ ಕಿಂಗ್ಡಮ್‌ನ ಪ್ರಧಾನಿಯಾಗಿದ್ದಾರೆ. ಆ ಮೂಲಕ ಹೊಸ ದಾಖಲೆ ಬರೆದಿದ್ದು, ಈ ಹಿಂದೆ ಜಾರ್ಜ್ ಕ್ಯಾನ್ನಿಂಗ್ 119 ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ತೊರೆದಿದ್ದರು. ಕ್ಷಯರೋಗದಿಂದ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾಗಲೇ ಅವರು ಮೃತಪಟ್ಟಿದ್ದರು. ಈ ಮೂಲಕ ಯುಕೆಯ ಅತಿ ಕಡಿಮೆ ಅವಧಿಯ ಪ್ರಧಾನಿ ಎನಿಸಿಕೊಂಡಿದ್ದರು. ಈ ದಾಖಲೆಯನ್ನು ಈಗ ಲಿಜ್ ಟ್ರಸ್ ಮುರಿದಿದ್ದಾರೆ.