ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ತಲ್ವಾರ್ ದಾಳಿ ಪ್ರಕರಣ; ಸಿಐಡಿ ಪೋಲಿಸರಿಂದ ತನಿಖೆ ಆರಂಭ

ಬೆಳ್ತಂಗಡಿ: ಜನಪ್ರಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಕಾರ್ ಹಿಂಬಾಲಿಸಿ ಕೊಲೆ ಬೆದರಿಕೆ ಮತ್ತು ಕೊಲೆಯತ್ನ ನಡೆಸಲಾಗಿದೆ‌ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಐ.ಡಿ. ತನಿಖೆ ಆರಂಭಗೊಂಡಿದೆ.

ರಾಜ್ಯದ ಸಿ.ಐ.ಡಿ.ಇನ್ಸ್‌ಪೆಕ್ಟರ್ ಶಿವರಾಜ್ ನೇತೃತ್ವದ ಓರ್ವ ಎಸ್.ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಒಳಗೊಂಡ ತಂಡ ನಿನ್ನೆಯೇ ಬಂಟ್ವಾಳಕ್ಕೆ ಬಂದಿಳಿದಿದ್ದು, ತನಿಖೆಯನ್ನು ಆರಂಭಿಸಿದೆ.

ಅಕ್ಟೋಬರ್‌ 13 ರಂದು ರಾತ್ರಿ ಶಾಸಕ ಹರೀಶ್ ಪೂಂಜಾ ಅವರು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಬೆಳ್ತಂಗಡಿಗೆ ತೆರಳುವ ವೇಳೆ ಓರ್ವ ವ್ಯಕ್ತಿ ಕಾರನ್ನು ಹಿಂಬಾಲಿಸಿ ತಲವಾರು ದಾಳಿಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಳ್ನೀರ್ ನಿವಾಸಿ ರಿಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸರಕಾರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿ.ಐ.ಡಿ.ಪೋಲೀಸರಿಗೆ ಒಪ್ಪಿಸಿತ್ತು. ಅ.18 ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ ಗಳನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ‌ಅವರು ಬೆಂಗಳೂರು ‌ಕಚೇರಿಗೆ ಮುಟ್ಟಿಸಿದ್ದರು.

ಇದೀಗ ಘಟನೆಗೆ ಸಂಬಂಧಿಸಿದಂತೆ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿದ್ದು, ಆರೋಪಿಯನ್ನು ತನಿಖೆಗೆ ಒಳಪಡಿಸಲಿದ್ದಾರೆ.