ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಮತ್ತು ಶಿರೋಮಣಿ ಅಕಾಲಿದಳ-ಸಂಯುಕ್ತ್ ಜೊತೆಗಿನ ತಮ್ಮ ಪಕ್ಷದ ಮೈತ್ರಿಯು ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಸಿಎಂ ಪ್ರತಿಪಾದಿಸಿದ್ದಾರೆ.
ನಾನು ನಿವೃತ್ತಿ ಹೊಂದಲು ಸಿದ್ಧನಿಲ್ಲ, ನನ್ನ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಇದು ನನ್ನ ಒಂಬತ್ತನೇ ಚುನಾವಣೆ. ನಾನು ಎರಡು ಬಾರಿ ಸಂಸತ್ತಿಗೆ ಮತ್ತು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಬಹು-ಪಕ್ಷಗಳ ಸ್ಪರ್ಧೆಯು ಮತದಾರನಿಗೆ ತನಗೆ ಬೇಕಾದುದನ್ನು ನಿರ್ಧರಿಸಲು ಸುಲಭವಾಗುತ್ತದೆ. ಆದರೆ ಪಕ್ಷಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಇದು ಅವರಿಗೆ ಕಷ್ಟಕರವಾದ ಹೋರಾಟವಾಗಿದೆ. ಅವರಲ್ಲಿ ಹಲವರಿಗೆ 10, 15 ಸೀಟು ದಾಟುವ ಅವಕಾಶವೇ ಇಲ್ಲ. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುದಿಲ್ಲ ಅಂತ ಕಾಣಿಸುತ್ತಿದೆ. ಜನರು ಎಎಪಿ(ಆಮ್ ಆದ್ಮಿ ಪಾರ್ಟಿ) ಬಗ್ಗೆ ಮಾತನಾಡುತ್ತಾರೆ. ಎಎಪಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಕಾಂಗ್ರೆಸ್ ಅಧೋಗತಿಗೆ ಹೋಗುತ್ತಿದೆ. ದೇವರ ದಯೆಯಿಂದ ನಾವು ಮೇಲಕ್ಕೆ ಹೋಗುತ್ತಿದ್ದೇವೆ ಎಂದು ಅಮರೀಂದರ್ ಸಿಂಗ್ ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.