ತಮಿಳುನಾಡಿಗೆ ನೀಟ್ನಿಂದ ವಿನಾಯಿತಿ ನೀಡುವ ವಿಧೇಯಕವನ್ನು ರಾಜ್ಯಪಾಲ ಆರ್.ಎನ್.ರವಿ ಅವರು ವಾಪಸ್ ಕಳುಹಿಸಿದ್ದು, ಅದನ್ನು ಮತ್ತೊಮ್ಮೆ ರಾಜ್ಯಪಾಲರಿಗೆ ಕಳುಹಿಸಲು ತಮಿಳುನಾಡು ಸರ್ಕಾರ ಮುಂದಿನ ವಾರ ವಿಶೇಷ ಅಧಿವೇಶನ ಕರೆದಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸರ್ವಪಕ್ಷ ಶಾಸಕರ ಸಭೆಯಲ್ಲಿ ನೀಟ್ ಮಸೂದೆಯನ್ನು ವಿಧಾನಸಭೆಯ ಮೂಲಕ ಮತ್ತೊಮ್ಮೆ ಕಳುಹಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದಕ್ಕಾಗಿ ಶೀಘ್ರದಲ್ಲೇ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಫೆಬ್ರವರಿ 8 ರಂದು ವಿಶೇಷ ಅಧಿವೇಶನ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಮಸೂದೆಯು ವಿದ್ಯಾರ್ಥಿಗಳ, ವಿಶೇಷವಾಗಿ ರಾಜ್ಯದ ಗ್ರಾಮೀಣ ಮತ್ತು ಆರ್ಥಿಕವಾಗಿ ಬಡ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ರಾಜ್ಯಪಾಲರ ಅಭಿಪ್ರಾಯವನ್ನು ತಮಿಳುನಾಡಿನ ಜನರು ಎಂದಿಗೂ ಒಪ್ಪುವುದಿಲ್ಲ ಎಂದು ನಿರ್ಣಯದಲ್ಲಿ ಹೇಳಿದೆ. ಆದ್ದರಿಂದ ರಾಜ್ಯಪಾಲರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಎಳೆಎಳೆಯಾಗಿ ಚರ್ಚಿಸಲಾಗುವುದು ಮತ್ತು ನೀಟ್ ಮಸೂದೆಯನ್ನು ಮತ್ತೊಮ್ಮೆ ಅಂಗೀಕರಿಸಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ತಿಳಿಸಿದ್ದಾರೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯಪಾಲರು 142 ದಿನಗಳ ಕಾಲ ನೀಟ್ ವಿಧೇಯಕವನ್ನು ಪರಿಗಣನೆಗೆ ಇಟ್ಟಿದ್ದು, ಪ್ರಸಕ್ತ ವರ್ಷದ ವೈದ್ಯಕೀಯ ಪ್ರವೇಶಾತಿ ಆರಂಭವಾದ ನಂತರವೇ ಅದನ್ನು ವಿಧಾನಸಭಾಧ್ಯಕ್ಷರಿಗೆ ಹಿಂದಿರುಗಿಸಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಡಿಎಂಕೆ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಪಿಎಂಕೆ ಮತ್ತು ವಿಸಿಕೆ ಸೇರಿದಂತೆ 10 ಪಕ್ಷಗಳ ಶಾಸಕರು ಭಾಗವಹಿಸಿದ್ದರು. ಆದರೆ ಪ್ರಮುಖ ಪ್ರತಿಪಕ್ಷಗಳಾದ ಎಐಎಡಿಎಂಕೆ, ಬಿಜೆಪಿ ಮತ್ತು ಪುರಟ್ಚಿ ಭಾರತಮ್ ಈ ಸಭೆಯನ್ನು ಬಹಿಷ್ಕರಿಸಿದ್ದವು.