ಕಮಲ ಹಿಡಿದ ಚಂದವನದ ಹಿರಿಯ ನಟ ನಟ ಶಶಿಕುಮಾರ್

ಬೆಂಗಳೂರು: ನಟ ಶಶಿಕುಮಾರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಎಸ್‌.ಟಿ. ಸೋಮಶೇಖರ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರ ಸಮ್ಮುಖದಲ್ಲಿ ನಟ ಶಶಿಕುಮಾರ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರೊಂದಿಗೆ ಕಾಂಗ್ರೆಸ್​ ನಾಯಕ ಮುದ್ದಹನುಮೇಗೌಡ ಮತ್ತು ಮಾಜಿ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌ ಕೂಡ ಸೇರ್ಪಡೆಯಾಗಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ‌ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಕೇಸರಿ ಶಾಲು ಹಾಕಿ, ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.

ನಟ ಶಶಿಕುಮಾರ್ 1999ರಲ್ಲಿಯೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1999ರಲ್ಲಿ ಜೆಡಿಯುನಿಂದ ಲೋಕಸಭೆಗೆ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ಜೆಡಿಎಸ್, ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದರು. ಆದ್ರೆ ಸತತ ಸೋಲನುಂಡ ಶಶಿಕುಮಾರ್ ಬಳಿಕ ರಾಜಕೀಯದಿಂದ ದೂರ ಉಳಿದಿದ್ದರು. ಈಗ ಮತ್ತೆ ಬಿಜೆಪಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದ ನಟ ಶಶಿಕುಮಾರ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಶಶಿಕುಮಾರ್, ‘ಬಿಜೆಪಿ ಪಕ್ಷಕ್ಕೆ ನಾನು ಹೊಸಬನಲ್ಲ. ಜೆಡಿಯು‌ನಲ್ಲಿದ್ದಾಗ ಎನ್‌ಡಿಎಯ ಭಾಗವಾಗಿದ್ದೆ. ವಾಜಪೇಯಿ ಸಮಯದಲ್ಲಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಈಗ ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತ, ಕಾರ್ಯ ವೈಖರಿ ನೋಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದಿದ್ದಾರೆ.

ಇನ್ನು ಶಶಿಕುಮಾರ್ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಪಕ್ಷದ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ. ಪಕ್ಷ ಬಯಸಿದರೆ, ನಾಯಕರು ಸೂಚಿಸಿದರೆ ಖಂಡಿತವಾಗಿಯೂ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ ಖುಷಿ ಕೊಟ್ಟಿದೆ. ನಾನು ಎಸ್ಟಿ ಸಮುದಾಯದವನಾದರೂ, ನಾನೊಬ್ಬ ನಟ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಕೆಲಸ ಮಾಡ್ತೀನಿ, ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲಾ ಬಿಜೆಪಿ ನಾಯಕರಿಗೆ ಧನ್ಯವಾದಗಳು ಎಂದರು.

LEAVE A REPLY

Please enter your comment!
Please enter your name here