ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಿ ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ‘ಡಿಜಿಟಲ್ ಕರೆನ್ಸಿ’ ವಿತರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಡಿಜಿಟಲ್ ಕರೆನ್ಸಿಯ ಮೂಲಕ ಸಮರ್ಥ ಹಾಗೂ ಕಡಿಮೆ ವೆಚ್ಚದಲ್ಲಿ ಕರೆನ್ಸಿ ನಿರ್ವಹಣಾ ವ್ಯವಸ್ಥೆ ಸಾಧ್ಯವಾಗಲಿದೆ. ಹಾಗಾಗಿ ಆರ್ಬಿಐ ಬ್ಲಾಕ್ಚೈನ್ ಸೇರಿದಂತೆ ಇತರೆ ತಂತ್ರಜ್ಞಾನಗಳನ್ನು ಬಳಸಿ ಡಿಜಿಟಲ್ ರೂಪಾಯಿ ಹೊರತರಲು ಪ್ರಸ್ತಾಪಿಸಲಾಗಿದೆ. 2022 ಮತ್ತು 2023ರಲ್ಲಿ ಡಿಜಿಟಲ್ ಕರೆನ್ಸಿ ಬಿಡುಗಡೆಯಾಗಲಿದೆ’ ಎಂದು ಭಾಷಣದಲ್ಲಿ ತಿಳಿಸಿದರು.
ಕೇಂದ್ರೀಯ ಬ್ಯಾಂಕ್ನ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಪರಿಚಯಿಸಲು ಆರ್ಬಿಐ ಹಲವು ಹಂತಗಳ ಯೋಜನೆ ರೂಪಿಸುತ್ತಿರುವುದಾಗಿ ಕಳೆದ ವರ್ಷ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಾಹಿತಿ ನೀಡಿತ್ತು. ಡಿಜಿಟಲ್ ರೂಪದಲ್ಲಿ ಕರೆನ್ಸಿ ತರಲು ಆರ್ಬಿಐ ಕಾಯ್ದೆ, 1934ಕ್ಕೆ ತಿದ್ದುಪಡಿ ತರಲು ಆರ್ಬಿಐ ಆಕ್ಟೋಬರ್ನಲ್ಲಿ ಪ್ರಸ್ತಾಪ ಮಾಡಿತ್ತು.
ವರ್ಚುವಲ್ ಡಿಜಿಟಲ್ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ವಿಧಿಸಿದೆ. ಇದರೊಂದಿಗೆ ಡಿಜಿಟಲ್ ಸ್ವತ್ತು ವರ್ಗಾವಣೆಗಾಗಿ ಮಾಡಲಾಗುವ ಪಾವತಿಗೆ ಶೇಕಡ 1ರಷ್ಟು ಮೂಲದಲ್ಲಿಯೇ ತೆರಿಗೆ ಕಡಿತಗೊಳಿಸುವುದಾಗಿ (ಟಿಡಿಎಸ್) ಘೋಷಿಸಲಾಗಿದೆ.