ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಲ್ಲಿ 8 ಮಂದಿಯನ್ನು ಸುಟ್ಟು ಕೊಲ್ಲಲಾಗಿದೆ. ರಾಮ್ಪುರ್ಹತ್ ಪಟ್ಟಣದ ಬಾಗ್ಟುಯಿ ಎಂಬ ಹಳ್ಳಿಯಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಬಡು ಶೇಖ್ ಎಂಬವರ ಮನೆಗೆ ಬೆಂಕಿ ಹಚ್ಚಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಪ್ರತೀಕಾರವಾಗಿ ನಡೆದ ಹಿಂಸಾಚಾರದಲ್ಲಿ ಮನೆಯೊಂದಕ್ಕೆ ದುಷ್ಕರ್ಮಿಗಳು ಕಚ್ಚಾಬಾಂಬ್ ಎಸೆದ ಪರಿಣಾಮ ಆ ಮನೆಯಲ್ಲಿದ್ದ 8 ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.
ಈ ರಾಜಕೀಯ ಹಿಂಸಾಚಾರ ಈಗ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವೆಯೂ, ಮುಖ್ಯಮಂತ್ರಿ ಮಮತಾ ಮತ್ತು ರಾಜ್ಯಪಾಲ ಜಗದೀಪ್ ಧನ್ಖರ್ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ.
`ಪಶ್ಚಿಮ ಬಂಗಾಳದಲ್ಲಿ ಮಾನವ ಹಕ್ಕುಗಳು ನಶಿಸಿಹೋಗಿವೆ ಮತ್ತು ಕಾನೂನು ಸುವ್ಯವಸ್ಥೆ ಯಾರದ್ದೋ ಸ್ವತ್ತಾಗಿದೆ’ ಎಂದು ಟ್ವೀಟಿಸಿದ್ದ ರಾಜ್ಯಪಾಲರು ಹಿಂಸಾಚಾರ ಸಂಬAಧ ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿದ್ದಾರೆ.
`ನಿಮ್ಮ ಹೇಳಿಕೆಗಳು ರಾಜಕೀಯ ಪ್ರೇರಿತ ಮತ್ತು ಇನ್ನೊಂದು ರಾಜಕೀಯ ಪಕ್ಷವನ್ನು ಬೆಂಬಲಿಸಿ ಸರ್ಕಾರದ ವಿರುದ್ಧ ಕಿಡಿಕಾರಿದಂತಿದೆ. ಗೌರವಾನ್ವಿತ ಹುದ್ದೆಯಲ್ಲಿರುವ ನಿಮ್ಮಂಥವರಿAದ ಇಂಥ ಹೇಳಿಕೆಗಳು ಆಪೇಕ್ಷಿತವಲ್ಲ’ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ಈ ನಡುವೆ ಹಿಂಸಾಚಾರ ಪೀಡಿತ ಹಳ್ಳಿಗೆ ಬಿಜೆಪಿ ನಿಯೋಗವೂ ಭೇಟಿ ನೀಡುತ್ತಿದೆ.