ಚಂದ್ರು ನಿಗೂಢ ಸಾವು ಪ್ರಕರಣ; ವಿನಯ್ ಗುರೂಜಿ ವಿಚಾರಣೆ ನಡೆಸಿದ ಪೊಲೀಸರು

Vinay Guruji

ಚಿಕ್ಕಮಗಳೂರು: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ವಿನಯ್ ಗುರೂಜಿ ಅವರನ್ನು ವಿಚಾರಣೆಗೊಳಪಡಿಸಿದೆ. ತನಿಖಾ ತಂಡ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಸಾವನ್ನಪ್ಪಿದ ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು.? ಭೇಟಿ ವೇಳೆ ಏನಾದರೂ ಸಮಸ್ಯೆಯನ್ನು ನಿಮ್ಮೊಂದಿಗೆ ಹೇಳಿಕೊಂಡಿದ್ರಾ? ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ ಎಂದು ವಿನಯ್ ಗುರೂಜಿ ಬಳಿ ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರು ಆಶ್ರಮದ ಭಕ್ತ, ಪ್ರತಿ ಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೇನೂ ನಾನು ಮಾತನಾಡಿಲ್ಲ. ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನು ಕಳುಹಿಸಿಕೊಟ್ಟಿದ್ದೇನೆ, ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ಗುರೂಜಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.