ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು
ಎರಡು ವರ್ಷಗಳಲ್ಲಿ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳು ಎದುರಾಯಿತು. ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರೂ ಸಂಪುಟ ವಿಸ್ತರಣೆಗೆ ವರಿಷ್ಠರು ಅವಕಾಶ ನೀಡಲಿಲ್ಲ. ಪ್ರವಾಹ ಬಂದಿತ್ತು, ಒಬ್ಬನೇ ಹುಚ್ಚನಂತೆ ರಾಜ್ಯವಿಡೀ ತಿರುಗಾಡಿದೆ.
-ಜುಲೈ 26, 2021ರಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಯಡಿಯೂರಪ್ಪ ಅವರು ಕಣ್ಣೀರು ಹಾಕಿ ಆಡಿದ ಮಾತು.
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಕರ್ನಾಟಕದಲ್ಲಿ ಬಿಜೆಪಿಯ ಏಕೈಕ ಜನನಾಯಕನ ಚುನಾವಣಾ ರಾಜಕೀಯ ಕೊನೆಯಾಗಿದೆ.
ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಮೊದಲ ಬಾರಿಗೆ ಕಮಲ ಪತಾಕೆ ಹಾರಿಸಿದ ಯಡಿಯೂರಪ್ಪ ತಮ್ಮ ಚುನಾವಣಾ ರಾಜಕೀಯದ ಕೊನೆಯ ಅಧಿವೇಶನದಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ವಿಧಾನಸಭೆಯಲ್ಲಿ ತಮ್ಮ ರಾಜಕೀಯ ಬದುಕಿನ ಕೊನೆಯ ಭಾಷಣ ಮಾಡಿದ್ದು ರಾಜಕೀಯ ವೈಚಿತ್ರ.
ಮಂಡ್ಯದ ಬೂಕನಕೆರೆಯಿಂದ ಬಂದ ತಮಗೆ ರಾಜಕೀಯ ಬದುಕು ಕೊಟ್ಟು ಪುರಸಭೆ ಸದಸ್ಯನಾಗಿ ಮೊದಲ ಬಾರಿಗೆ ಚುನಾವಣಾ ರಾಜಕೀಯದಲ್ಲಿ ಗೆದ್ದ ತಮ್ಮನ್ನು ನಾಲ್ಕು ಬಾರಿ ರಾಜ್ಯದ ಅತ್ಯುನ್ನತ ರಾಜಕೀಯ ಗಾದಿ ಏರಲು ಅಡಿಪಾಯವಾಗಿದ್ದ ತಮ್ಮ ರಾಜಕೀಯ ಕರ್ಮಭೂಮಿ ಶಿಕಾರಿಪುರ ಜನತೆಗಿರುವ ತಮ್ಮ ಋಣವನ್ನು ಯಡಿಯೂರಪ್ಪ ಸ್ಮರಿಸಿದ್ದಾರೆ.
ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬುಧವಾರವೇ ತಮ್ಮ ವಿದಾಯದ ಮಾತುಗಳನ್ನಾಡಿದ್ದರು. ಆದರೆ 16ನೇ ವಿಧಾನಸಭೆಯ ಕೊನೆಯ ಅಧಿವೇಶನದ ಮುಕ್ತಾಯದ ದಿನವಾದ ಇಂದೂ ಯಡಿಯೂರಪ್ಪನವರು ವಿದಾಯದ ಭಾಷಣ ಮಾಡಿದ್ದಾರೆ.
ಮೂರು ದಿನದ ಅಂತರದಲ್ಲಿ ಯಡಿಯೂರಪ್ಪನವರು ಆಡಿದ ಎರಡು ವಿದಾಯದ ಭಾಷಣಗಳಲ್ಲಿ ಅಂತಹ ವಿಶೇಷಗಳೂ ಇಲ್ಲ, ಅಂತಹ ಆವೇಗವೂ ಇಲ್ಲ, ಅಂತಹ ಆವೇಶವೂ ಇಲ್ಲ.
2007ರಲ್ಲಿ ಕುಮಾರಸ್ವಾಮಿ ಅವರ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದಾಗ ಕೇವಲ 8 ದಿನ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರನ್ನು 2008ರಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೂರ್ಣಾವಧಿ ಸಿಎಂ ಆಗಲು ಅವರದ್ದೇ ಪಕ್ಷದವರು ಬಿಡಲಿಲ್ಲ. 2021ರಲ್ಲೂ ಯಡಿಯೂರಪ್ಪನವರಿಗೆ ಅದೇ ಆಯಿತು. ಎರಡೂ ಬಾರಿಯೂ ಕಣ್ಣೀರು ಹಾಕಿಸಿಯೇ ಬಿಜೆಪಿ ನಾಯಕರು ಮುಖ್ಯಮಂತ್ರಿ ಗಾದಿಯಿಂದ ಇಳಿಸಿದರು.
2018ರ ಚುನಾವಣೆಯಲ್ಲಿ ಯಾರಿಗೂ ಫಲಿತಾಂಶ ಬರದೇ ಇದ್ದಾಗ ಬಹುಮತಕ್ಕೆ 8 ಸೀಟುಗಳ ಕೊರತೆಯಲ್ಲಿ ಬಿಜೆಪಿ ಪಕ್ಷದ ನಾಯಕ ಯಡಿಯೂರಪ್ಪ ಅವರಿಗೆ ಮೇ 17ರಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಸರ್ಕಾರ ರಚನೆಗೆ ಆಹ್ವಾನ ನೀಡಿದರು.
ಬಹುಮತ ಸಾಬೀತಿಗೆ 15 ದಿನಗಳ ಕಾಲಾವಧಿಯನ್ನು ರಾಜ್ಯಪಾಲರು ನೀಡಿದರಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸುಪ್ರೀಂಕೋರ್ಟ್ನ ಕದ ತಟ್ಟಿದ್ದರಿಂದ ಮೇ 19ರ ಸಂಜೆ 4 ಗಂಟೆಯೊಳಗೆ ಬಹುಮತ ಸಾಬೀತಿಗೆ ಸುಪ್ರೀಂಕೋರ್ಟ್ ಗಡುವು ನೀಡಿತು.
ಮೇ 19ರಂದು ನಡೆದ ಅರ್ಧಗಂಟೆ ಆವೇಶ, ಆವೇಗ ಭರಿತ ಭಾಷಣ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತಯಾಚಿಸದೇ ನೇರವಾಗಿ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಅಲ್ಲಿಗೆ ಕೇವಲ ಎರಡೂವರೆ ದಿನ ಮುಖ್ಯಮಂತ್ರಿ ಎಂಬ ಹಣೆಪಟ್ಟಿಯೂ ಯಡಿಯೂರಪ್ಪನವರಿಗೆ ಅಂಟಿತು.
ಬಳಿಕ 2018ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಂದಾಗ ವಿರೋಧ ಪಕ್ಷದ ನಾಯಕನಾಗಿ ಯಡಿಯೂರಪ್ಪ ಅವರ ಭಾಷಣ ಮತ್ತು 2019ರಲ್ಲಿ 4ನೇ ಬಾರಿ ಮುಖ್ಯಮಂತ್ರಿಯಾಗಿ ಮಾಡಿದ ಭಾಷಣವನ್ನು ಕೇಳಿದರೆ ಇವತ್ತಿನ ಅವರ ವಿದಾಯದ ಭಾಷಣ ಸಪ್ಪೆ ಎನ್ನಿಸಿದರೆ ಅಚ್ಚರಿಯಿಲ್ಲ.
ಇವತ್ತಿನ ವಿದಾಯದ ಭಾಷಣಕ್ಕಿಂತ ಒಂದೂವರೆ ವರ್ಷದ ಹಿಂದೆ 2021ರ ಜಲೈನಲ್ಲಿ ಮಾಡಿದ ವಿದಾಯದ ಭಾಷಣವೇ ಯಡಿಯೂರಪ್ಪನವರ ಮನದಾಳದ ವಿದಾಯದ ಭಾಷಣ.
ಇದೇ ನಿಜವಾದ ವಿದಾಯದ ಭಾಷಣ:
ಆ ಭಾಷಣದಲ್ಲಿ ನೋವಿತ್ತು, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ತರಲು ಏಣಿಯಾದ ತಮ್ಮನ್ನು ರಾಷ್ಟ್ರೀಯ ನಾಯಕರು ನಡೆಸಿಕೊಂಡ ರೀತಿಗೆ ಖೇದವಿತ್ತು, ಎರಡೂ ಬಾರಿ ಪೂರ್ಣಾವಧಿ ಪೂರೈಸದ ಮುಖ್ಯಮಂತ್ರಿ ಎಂಬ ಅನಗತ್ಯ ಕಳಂಕವನ್ನಿಟ್ಟ ಪಕ್ಷದ ಪ್ರಮುಖರ ಬಗ್ಗೆ ಅಸಮಾಧಾನವಿತ್ತು.
ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಬೀಜವನ್ನು ಬಿತ್ತಿ ಅದರನ್ನು ಹೆಮ್ಮರವಾಗಿ ಬೆಳೆಸಿದ, ಅದಕ್ಕಾಗಿ ತಾವು ಸವೆಸಿದ ಹಾದಿ, ಎದುರಿಸಿದ ಸಂಘರ್ಷಗಳು-ಸವಾಲುಗಳು ಎಲ್ಲವನ್ನೂ ಮರೆತು ಹೆಮ್ಮರವಾದ ಬಳಿಕ ಅದರ ಹಣ್ಣುಗಳಿಗಾಗಿ ಮುಗಿ ಬೀಳುವವರಂತೆ ವರ್ತಿಸಿದರ ಸ್ವಪಕ್ಷೀಯರ ಬಗ್ಗೆ ಯಡಿಯೂರಪ್ಪನವರಿಗೆ ನೋವಿತ್ತು.
ಎರಡು ವರ್ಷಗಳಲ್ಲಿ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆಗಳು ಎದುರಾಯಿತು. ಮುಖ್ಯಮಂತ್ರಿ ಆಗಿ ಅಧಿಕಾರವಹಿಸಿಕೊಂಡರೂ ಸಂಪುಟ ವಿಸ್ತರಣೆಗೆ ವರಿಷ್ಠರು ಅವಕಾಶ ನೀಡಲಿಲ್ಲ. ಪ್ರವಾಹ ಬಂದಿತ್ತು, ಒಬ್ಬನೇ ಹುಚ್ಚನಂತೆ ರಾಜ್ಯವಿಡೀ ತಿರುಗಾಡಿದೆ
ಶಿಕಾರಿಪುರದ ದಿನಗಳಲ್ಲಿ ಒಂದು ಹೋರಾಟ ನಡೆಸಲು 50 ಜನ ಸಿಗದ ಕಾಲದಿಂದಲೂ ಹೋರಾಟ ನಡೆಸಿಕೊಂಡು ಬಂದೆ. ಶಿವಮೊಗ್ಗ, ಶಿಕಾರಿಪುರ, ಬನವಾಸಿ ಹೀಗೆ ಎಲ್ಲ ಕಡೆ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆವು. ವಿಧಾನಸಭೆಯಲ್ಲಿ ನಾನು ಮತ್ತು ವಸಂತ ಬಂಗೇರ ಆಯ್ಕೆ ಆಗಿ ಬಂದಾಗ ಇದ್ದದ್ದು ಇಬ್ಬರೇ. ಬಂಗೇರ ಪಕ್ಷ ಬಿಟ್ಟರು. ಬೇರೆ ಯಾವುದೇ ಯೋಚನೆ ಮಾಡದೇ ಒಬ್ಬನೇ ವಿಧಾನಸಭೆಯಲ್ಲಿ ಹೋರಾಟ ನಡೆಸಿಕೊಂಡು ಬಂದೆ.
ಒಮ್ಮೆ ದಾರಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಯಿತು. ಬದುಕಿದರೆ ಜನರ ಸೇವೆಗೆ ನನ್ನ ಜೀವನ ಮೀಸಲಿಡಬೇಕು ಎಂಬ ಭಾವನೆ ಬಂದಿತು. ಅದೇ ರೀತಿ ನಡೆದುಕೊಂಡೇ.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚನೆ ಆದಾಗ ಮಂತ್ರಿ ಆಗಲು ಬನ್ನಿ ಎಂದು ಆಹ್ವಾನ ನೀಡಿದರು. ಕರ್ನಾಟಕದಲ್ಲಿ ಪಕ್ಷ ಕಟ್ಟಲು ಬಿಡಿ, ನಾನು ದೆಹಲಿಗೆ ಬರುವುದಿಲ್ಲ ಎಂದು ಹೇಳಿದೆ.
ಅಟಲ್-ಅಡ್ವಾಣಿ ಬಂದಾಗ 200ರಿಂದ 300 ಜನರ ಸೇರಿಸುವುದು ಕಷ್ಟ ಆಗುತ್ತಿತ್ತು. ಛಲ ಬಿಡದೇ ಅವರನ್ನು ಕರೆದುಕೊಂಡು ರಾಜ್ಯದ ಉದ್ದಗಲ ಒಡಾಟ ಮಾಡಿತು. ಕರ್ನಾಟಕದಲ್ಲಿ 2 ಇದ್ದಿದ್ದು ನಾಲ್ಕು ಆಯಿತು. ಹಾಗೇ ನಾವೆಲ್ಲರೂ ಸೇರಿ ಪಕ್ಷವನ್ನು ಕಟ್ಟಿದೆವು.
ಕಾರು ಇಲ್ಲದೇ ಸೈಕಲ್ನಲ್ಲಿ ಒಡಾಡಿ ಪಕ್ಷವನ್ನು ಕಟ್ಟಿದೆವು. ಯಾರೂ ಇಲ್ಲದಾಗ ಪಾರ್ಟಿ ಕಟ್ಟಿದ್ದು ಈಗ ದೇಶದ ಅತೀ ದೊಡ್ಡ ಪಕ್ಷವಾಗಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸಿ ಬಿಜೆಪಿ ರಾಷ್ಟ್ರೀಯ ನಾಯಕರು ಸಾಧಿಸಿದ್ದೇನು ಎಂಬುದಕ್ಕೆ ಬಹುಶಃ ಅವರ ಬಳಿ ಉತ್ತರವಿರಲಿಕ್ಕಿಲ್ಲ.
ಆದರೆ ಕರ್ನಾಟಕದಲ್ಲಿ ಬಿಜೆಪಿ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಬಿಜೆಪಿ ಎಂಬಂತ ಸ್ಥಿತಿಯಲ್ಲಿ ಪಕ್ಷದ ಏಕೈಕ ಜನ ನಾಯಕನನ್ನು ಕೊನೆ ಸಾಲಿನಲ್ಲಿ ಕುಳ್ಳಿರಿಸಿ ಕಳುಹಿಸಿದ್ದು ನಿಜಕ್ಕೂ ರಾಜಕೀಯ ವಿಚಿತ್ರ.
ADVERTISEMENT
ADVERTISEMENT