ಪದಕ ಗಂಗಾ ನದಿಯಲ್ಲಿ ವಿಸರ್ಜನೆ, ಬಳಿಕ ಅಮರಣಾಂತ ಉಪವಾಸ ಸತ್ಯಾಗ್ರಹ – ಕುಸ್ತಿ ಪಟುಗಳ ಘೋಷಣೆ

ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಬಂಧನಕ್ಕೆ ಆಗ್ರಹಿಸಿ ಪ್ರಸಿದ್ಧ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಈಗ ಹೊಸ ರೂಪ ಪಡೆದುಕೊಂಡಿದೆ.
ತಾವು ಗೆದ್ದಿರುವ ಪದಕಗಳನ್ನು ಇವತ್ತು ಸಂಜೆ 6 ಗಂಟೆಗೆ ಗಂಗಾನದಿಯಲ್ಲಿ ವಿಸರ್ಜನೆ ಮಾಡುವುದಾಗಿ ಕುಸ್ತಿ ಪಟುಗಳ ಘೋಷಿಸಿದ್ದಾರೆ.
ಗಂಗಾನದಿಯಲ್ಲಿ ಪದಕಗಳನ್ನು ವಿಸರ್ಜನೆ ಮಾಡಿದ ಬಳಿಕ ಇವತ್ತೇ ಇಂಡಿಯಾ ಗೇಟ್​ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೂರುವುದಾಗಿ ಕುಸ್ತಿ ಪಟುಗಳು ಘೋಷಿಸಿದ್ದಾರೆ.
ಈ ಬಗ್ಗೆ ಕುಸ್ತಿ ಪಟು ಸಾಕ್ಷಿ ಮಲ್ಲಿಕ್​ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಈ ಪದಕಗಳು ನಮ್ಮ ಜೀವ ಮತ್ತು ನಮ್ಮ ಆತ್ಮ. ಆ ಪದಕಗಳನ್ನು ವಿಸರ್ಜನೆ ಮಾಡಿದ ಬಳಿಕ ಬದುಕುವುದರಲ್ಲಿ ಅರ್ಥ ಇರಲ್ಲ. ಹೀಗಾಗಿ ಪದಕ ವಿಸರ್ಜನೆ ಬಳಿಕ ನಾವು ಇಂಡಿಯಾ ಗೇಟ್​ ಬಳಿ ಅಮರಣಾಂತ ಉಪವಾಸ ಕೈಗೊಳ್ಳುತ್ತೇವೆ
ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಬಗ್ಗೆ ಕಾಳಜಿ ತೋರಲಿಲ್ಲ. ಬದಲಿಗೆ ಸಂಸತ್ತಿನ ಹೊಸ ಕಟ್ಟಡ ಉದ್ಘಾಟನೆಗೆ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರನ್ನು ಆಹ್ವಾನಿಸಿದರು. ಆತ ಹೊಳೆಯುವ ಬಿಳಿ ಬಟ್ಟೆಯಲ್ಲಿ ಫೋಟೋಗಳಿಗೆ ಪೋಸ್​ ಕೊಟ್ಟ. ಆತನ ಬಟ್ಟೆಯ ಹೊಳೆಪು ನಮ್ಮನ್ನು ಕುಟುಕುತ್ತಿದೆ
ಎಂದು ಸಾಕ್ಷಿ ಮಲಿಕ್​ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರಪಪ್ರದೇಶದ ಬಿಜೆಪಿ ಸಂಸದನಾಗಿರುವ ಬ್ರಿಜ್​ ಭೂಷಣ್​ ಸರಣ್​ ಸಿಂಗ್​ ವಿರುದ್ಧ ದೆಹಲಿ ಪೊಲೀಸರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ 7 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ 1 ಪೋಕ್ಸೋ ಪ್ರಕರಣವೂ ಸೇರಿದೆ.
ಏಪ್ರಿಲ್​ 23ರಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳು ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಮೇ 28ರಂದು ದೆಹಲಿ ಪೊಲೀಸರು ಹತ್ತಿಕ್ಕಿ ತೆರವುಗೊಳಿಸಿದ್ದರು.