ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕಳೆದ 47 ದಿನಗಳಿಂದ ಕುಸ್ತಿಪಟುಗಳು ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ದೆಹಲಿ ಪೊಲೀಸರು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ.
ಭಾನುವಾರ ಒಲಿಂಪಿಕ್ ಪದಕ ವಿಜೇತರವನ್ನು ಬಲವಂತವಾಗಿ ಬಂಧಿಸಿದ ದೆಹಲಿ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದಿದ್ದಾರೆ. ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಮತ್ತು ಇತರೆ ಹೋರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬಂಧನದ ಬೆನ್ನಲ್ಲೇ ದೆಹಲಿಯ ಜಂತರ್ಮಂತರ್ನಲ್ಲಿ ಇದ್ದ ಕುಸ್ತಿಪಟುಗಳ ಟೆಂಟ್ಗಳನ್ನು ದೆಹಲಿ ಪೊಲೀಸರು ತೆರವು ಮಾಡಿದ್ದಾರೆ. ಅಲ್ಲಿಗೆ ಹೋಗಲು ಮಾಧ್ಯಮದವರಿಗೂ ಬಿಡುತ್ತಿಲ್ಲ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ADVERTISEMENT
ADVERTISEMENT
ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ. ಪೊಲೀಸ್ ಕಸ್ಟಡಿಯಿಂದ ರಿಲೀಸ್ ಆದ ಕೂಡಲೇ ಜಂತರ್ ಮಂತರ್ ಬಳಿ ಮತ್ತೆ ಸತ್ಯಾಗ್ರಹ ನಿರ್ವಹಿಸುತ್ತೇವೆ
– ಸಾಕ್ಷಿ ಮಲಿಕ್
ಕಳೆದ ರಾತ್ರಿ ಕೆಲ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ ಬಳಿಗೆ ಬರಲು ಪ್ರಯತ್ನಿಸಿದರೂ, ಅವರಿಗೆ ಅನುಮತಿ ನಿರಾಕರಿಸಿ ವಾಪಸ್ ಕಳಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ವ್ಯಕ್ತಿ ಹೊಸ ಸಂಸತ್ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ದುರಾದೃಷ್ಟಕರ. ನಮ್ಮ ಮೇಲೆ ಎಫ್ಐಆರ್ ನಮೂದು ಮಾಡುವುದಕ್ಕೆ ದೆಹಲಿ ಪೊಲೀಸರಿಗೆ ಕೆಲ ಗಂಟೆಗಳು ಕೂಡ ಹಿಡಿಯಲಿಲ್ಲ. ಅದೇ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲು ಕೆಲವು ವಾರಗಳೇ ಹಿಡಿದವು. ನಾವು ಮತ್ತೆ ಮನೆಗೆ ಮರಳುವುದು ಸರಿಯಾದ ಆಪ್ಶನ್ ಅಲ್ಲ. ಇತರೆ ಕುಸ್ತಿಪಟುಗಳನ್ನು ನಾನು ಭೇಟಿ ಮಾಡುತ್ತೇನೆ. ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ.
– ಬಜರಂಗ್ ಪೂನಿಯಾ
ಘಾಜಿಪುರ್ ಬಾರ್ಡರ್ನಲ್ಲಿ ರೈತರ ಪ್ರತಿಭಟನೆ
ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ರೈತ ಸಂಘಟನೆಗಳು ಭಾರೀ ಹೋರಾಟಕ್ಕೆ ಮುಂದಾಗಿವೆ. ರೈತ ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ರೈತರು ಘಾಜಿಪುರ್ ಬಾರ್ಡರ್ನಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಹೊಸ ಸಂಸತ್ ಭವನದ ಉದ್ಘಾಟನೆ ದಿನವೇ ಮಹಿಳಾ ಕಸ್ತಿಪಟುಗಳ ಮೇಲೆ ನಡೆದ ದೌರ್ಜನ್ಯ ದೇಶದ ಚರಿತ್ರೆಯ ಪುಟಗಳಲ್ಲಿ ಉಳಿಯಲಿದೆ
– ರಾಕೇಶ್ ಟಿಕಾಯತ್