ಕುಸ್ತಿ ಪಟುಗಳ ಜೊತೆಗೆ ಅಮಿತ್​ ಶಾ ಮಧ್ಯರಾತ್ರಿ ಸಭೆ

ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿಯಲ್ಲಿ ಶಾ ಅವರ ನಿವಾಸದಲ್ಲಿ ಸಭೆ ನಡೆದಿದೆ. 2 ಗಂಟೆಗೂ ಹೆಚ್ಚು ಹೊತ್ತು ನಡೆದ ಸಭೆ ಮಧ್ಯರಾತ್ರಿ ಕೊನೆಗೊಂಡಿತ್ತು.
ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಬಜರಂಗ್​ ಪೂನಿಯಾ, ವಿನೇಶ್​ ಪೋಗಟ್​, ಸಾಕ್ಷಿ ಮಲಿಕ್ ಕೂಡಾ ಸಚಿವ ಶಾ ಅವರ ಜೊತೆಗಿನ ಸಭೆಯಲ್ಲಿದ್ದರು.
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ವಿರುದ್ಧ ಆದಷ್ಟು ಬೇಗ ಆರೋಪಪಟ್ಟಿ ಸಲ್ಲಿಸುವಂತೆ ಅಮಿತ್​ ಶಾ ಅವರಿಗೆ ಕುಸ್ತಿಪಟುಗಳು ಹಕ್ಕೊತ್ತಾಯ ಮಾಡಿದ್ದಾರೆ.
ಕಾನೂನು ತನ್ನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಮಿತ್​ ಶಾ ಅವರು ಕುಸ್ತಿಪಟುಗಳಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತಾರೆ. ಸುಪ್ರೀಂಕೋರ್ಟ್​ ಸೂಚನೆಯ ಬಳಿಕ ಏಪ್ರಿಲ್​ 28ರಂದು ದೆಹಲಿ ಪೊಲೀಸರು ಬಿಜೆಪಿ ಸಂಸದನ ವಿರುದ್ಧ 7 ಎಫ್​ಐಆರ್​ ದಾಖಲಿಸಿಕೊಂಡಿದ್ದರು. 
6 ವಯಸ್ಕ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಅಪ್ರಾಪ್ತ ಬಾಲಕಿ ಕುಸ್ತಿ ಪಟುವಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ದಾಖಲಾಗಿತ್ತು.
ಲೈಂಗಿಕ ಕಿರುಕುಳ ಮತ್ತು ಪೋಸ್ಕೋ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ದೆಹಲಿ ಪೊಲೀಸರು ಆರೋಪಿ ಬಿಜೆಪಿ ಸಂಸದನನ್ನು ಬಂಧಿಸಿಲ್ಲ.
ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಾವು ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜನೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದರು.