ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್​ ಪ್ರಯೋಗ

ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಬಂಧನಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಮಹಿಳಾ ಕುಸ್ತಿಗಳು ನಡೆಸಿದ ಪ್ರತಿಭಟನೆಯನ್ನು ದೆಹಲಿ ಪೊಲೀಸರು ಹತ್ತಿಕ್ಕಿದ್ದಾರೆ.

ಅತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿನ ಹೊಸ ಕಟ್ಟಡ ಉದ್ಘಾಟಿಸುತ್ತಿದ್ದರೆ, ಇತ್ತ ಸಂಸತ್ತಿನ ಹೊಸ ಕಟ್ಟಡಕ್ಕೆ ಮುತ್ತಿಗೆಗೆ ಹೊರಟ್ಟಿದ್ದ ಮಹಿಳಾ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಎಳೆದಾಡಿ ಪೊಲೀಸ್​ ಜೀಪ್​ಳೊಗೆ ನುಗ್ಗಿಸಿ ವಶಕ್ಕೆ ಪಡೆದು ಎಳೆದೊಯ್ದಿದ್ದಾರೆ.

ಹೊಸ ದೇಶಕ್ಕೆ ಸ್ವಾಗತ ಎಂದು ಪೊಲೀಸ್​ ವ್ಯಾನ್​ನಿಂದಲೇ ಪ್ರಮುಖ ಮಹಿಳಾ ಕುಸ್ತಿಪಟುಗಳು ಘೋಷಣೆ ಕೂಗಿದ್ದಾರೆ.
ಏಪ್ರಿಲ್​ 23ರಿಂದ ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟಿಸುತ್ತಿದ್ದಾರೆ.

ಒಲಿಂಪಿಕ್ಸ್​, ಕಾಮನ್​ವೆಲ್ತ್​ ಗೇಮ್ಸ್​ ಮತ್ತು ಏಷಿಯನ್​ ಗೇಮ್ಸ್​ನಲ್ಲಿ ದೇಶಕ್ಕೆ ಪದಕಗಳನ್ನು ಜಯಿಸಿರುವ ಪ್ರಸಿದ್ಧ ಮಹಿಳಾ ಕುಸ್ತಿ ಪಟುಗಳ ಹೋರಾಟಕ್ಕೂ ಮೋದಿ ಸರ್ಕಾರ ಸ್ಪಂದಿಸಿಲ್ಲ.

ಸುಪ್ರೀಂಕೋರ್ಟ್​ ಆದೇಶದ ಬಳಿಕ ದೆಹಲಿ ಪೊಲೀಸರು ಬಿಜೆಪಿ ಸಂಸದನ ವಿರುದ್ಧ ಏಳು ಎಫ್​ಐಆರ್​ಗಳನ್ನು ದಾಖಲಿಸಿದ್ದಾರೆ.
ಆ ಏಳು ಕೇಸ್​ಗಳ ಪೈಕಿ 1 ಪೋಕ್ಸೋ ಪ್ರಕರಣವೂ ಒಳಗೊಂಡಿದೆ. ಅಪ್ರಾಪ್ತ ಬಾಲಕಿ ಕುಸ್ತಿ ಪಟುವಿಗೆ ಲೈಂಗಿಕ ಕಿರುಕುಳ ನೀಡಿ ಆರೋಪದಡಿ ಬಿಜೆಪಿ ಸಂಸದನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಆದರೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಧೀನದಲ್ಲಿ ಬರುವ ದೆಹಲಿ ಪೊಲೀಸರು ಇದುವರೆಗೂ ಬಿಜೆಪಿ ಸಂಸದನನ್ನು ಬಂಧಿಸಿಲ್ಲ.

ಮಹಿಳಾ ಕುಸ್ತಿ ಪಟುಗಳನ್ನು ವಶಕ್ಕೆ ಪಡೆದ ಬಳಿಕ ದೆಹಲಿ ಪೊಲೀಸರು ಜಂತರ್​ ಮಂತರ್​ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಹಾಕಲಾಗಿದ್ದ ಟೆಂಟ್​ಗಳನ್ನೆಲ್ಲ ತೆರವುಗೊಳಿಸಿದ್ದಾರೆ.