ಮಂಗಳೂರು ಗೋಲಿಬಾರ್ – ಕಾರಣ ಯಾರು..?

ಮಂಗಳೂರು ಗೋಲಿಬಾರ್‍ಗೆ ಕಾರಣ ಯಾರು..? ಇಬ್ಬರು ಪ್ರತಿಭಟನಾಕಾರರ ಸಾವಿಗೆ ಯಾರು ಹೊಣೆ..? ಅಸ್ಸಾಂ,ದೆಹಲಿಯಲ್ಲಿ ನಡೆಯದ ಗೋಲಿಬಾರ್ ರಾಜ್ಯದ ಮಂಗಳೂರಿನಲ್ಲಿ ನಡೆದಿದ್ದೇಕೆ..? ಕಾಂಗ್ರೆಸ್ ಮಾಜಿ ಸಚಿವ ಯುಟಿ ಖಾದರ್ ನೀಡಿದ ಹೇಳಿಕೆಯಿಂದಾಗಿ ಇಷ್ಟೆಲ್ಲಾ ಆಯಿತಾ..? ಇಂತಹ ಹಲವು ಪ್ರಶ್ನೆಗಳ ಸಮೇತ ರಾಜಕೀಯ ಪಕ್ಷಗಳು ಕೆಸರೆರಚಾಟದಲ್ಲಿ ತೊಡಗಿವೆ.

ಬಿಎಸ್‍ವೈ ಸರ್ಕಾರಕ್ಕೆ ಕುಮಾರಸ್ವಾಮಿ ಅಷ್ಟ ಪ್ರಶ್ನೆ..
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಿಂಸಾತ್ಮಕ ಪ್ರತಿಭಟನೆ ಜನರ ಅಸ್ತ್ರ. ಶಾಂತಿಯುತ ಪ್ರತಿಭಟನೆಯನ್ನೂ ಅರಗಿಸಿಕೊಳ್ಳಲಾಗದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಲೀಸ್ ಬಲಪ್ರಯೋಗದ ಮೂಲಕ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಜನಸಾಮಾನ್ಯರು ಭಯ ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ.ರಾಜ್ಯದ ಮಂಗಳೂರು, ಕಲಬುರಗಿ ಸೇರಿದಂತೆ ದೇಶದ ಹಲವೆಡೆ ಕಂಡಲ್ಲಿ ಗುಂಡಿಕ್ಕುವ ಆತಂಕದಲ್ಲಿ ಜನತೆ ಕಂಗಲಾಗಿದ್ದಾರೆ. ಇದು ತುರ್ತು ಪರಿಸ್ಥಿತಿಯ ಮುನ್ಸೂಚನೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಅಷ್ಟ ಪ್ರಶ್ನೆಗಳನ್ನು ಮಾಜಿ ಮುಖ್ಯಮಂತ್ರಿ ಕೇಳಿದ್ದಾರೆ.

ಪ್ರಶ್ನೆ 1- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಇಬ್ಬರು ಅಮಾಯಕರನ್ನು ರಾಜ್ಯ ಸರ್ಕಾರ ಗೋಲಿಬಾರ್ ನಡೆಸಿ ಬಲಿ ತೆಗೆದುಕೊಂಡಿದ್ದು ಯಾವ ಕಾರಣಕ್ಕೆ..?

ಪ್ರಶ್ನೆ 2- ಯಾರನ್ನು ಮೆಚ್ಚಿಸಲು ಇಂತಹ ಮತಿಗೇಡಿ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದ್ದು..?

ಪ್ರಶ್ನೆ 3- ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಮೆಚ್ಚಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಮಾಯಕರ ಮೇಲೆ ಗುಂಡು ಸಿಡಿಸಿತೆ..?

ಪ್ರಶ್ನೆ 4 – ಅಧಿಕಾರಿಗಳು ತಾವಾಗಿಯೇ ಶಾಂತಿಯುತ ಪ್ರತಿಭಟನೆ ತಹಬದಿಗೆ ತರಲು ಅವಿವೇಕದ ನಿರ್ಧಾರ ಕೈಗೊಂಡರೋ?

ಪ್ರಶ್ನೆ 5 – ರಾಜ್ಯ ಸರ್ಕಾರ ಶೌರ್ಯ ಪ್ರದರ್ಶನಕ್ಕೆ ಮುಂದಾಗಿ ಇಂತಹ ಆದೇಶ ನೀಡಿತೇ..?

ಪ್ರಶ್ನೆ 6 – ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ಮೊದು ತೀವ್ರತರವಾದ ಪ್ರತಿಭಟನೆ, ಆಕ್ರೋಶ ಭುಗಿಲೆದ್ದಿತ್ತು. ಆದರೆ, ಅಲ್ಲಿ ನಡೆಯದ ಗೋಲಿಬಾರ್ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದ ರಾಜ್ಯದಲ್ಲಿ ನಡೆದಿದ್ದಾದರೂ ಏಕೆ..? ಅಮಾಯಕರ ರಕ್ತತರ್ಪಣ ಕೊಡುವ ಮೂಲಕ ಯಾರಿಗೆ ಯಾವ ಸಂದೇಶ ಕೊಡುತ್ತಿದ್ದೀರಿ..?

ಪ್ರಶ್ನೆ 7 – ಪೊಲೀಸರ ಗುಂಡಿಗೆ ಬಲಿಯಾದ ಅಮಾಯಕರ ಕುಟುಂಬದ ಜವಾಬ್ದಾರಿ ಹೋರುವವರು ಯಾರು..? ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರು ಪ್ರತಿಭಟಿಸಲೇಬಾರದೆ..? ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಪವಿತ್ರ ಸರ್ಕಾರ ಮಾಡಲು ಹೊರಟಿರುವುದಾದರೂ ಏನು..?

ಪ್ರಶ್ನೆ 8 – ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಪ್ರತಿಭಟನೆಗೆ ನಿರ್ಬಂಧ ಹೇರಲು ಕಾರಣಗಳೇನು? ಇದರ ಹಿಂದಿರುವ ಹಕೀಕತ್ತಾದರೂ ಏನು..?

ಗೋಲಿಬಾರ್‍ಗೆ ಯುಟಿ ಖಾದರ್ ಹೊಣೆ.. – ಸಂತೋಷ್ ಆರೋಪ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆದರೆ ರಾಜ್ಯ ಹೊತ್ತಿ ಉರಿಯಬಹುದು ಎಂದು ಕಾಂಗ್ರೆಸ್‍ನ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ ನೀಡಿದ ಮರುದಿನವೇ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‍ಗೆ ಇಬ್ಬರು ಬಲಿಯಾಗಿದ್ದರು. ಹೀಗಾಗಿ ಇಬ್ಬರ ಸಾವಿಗೆ ಯುಟಿ ಖಾದರ್ ಹೊಣೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಆರೋಪ ಮಾಡಿದ್ದಾರೆ.

LEAVE A REPLY

Please enter your comment!
Please enter your name here