ಮಹಾರಾಷ್ಟ್ರದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಎಂಎನ್ಎಸ್ ಪಕ್ಷದ ಮುಖಂಡ ರಾಜ್ ಠಾಕ್ರೆಯವರು ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದರು. ಈ ಬೆನ್ನಲ್ಲೇ, ಇವರಿಗೆ 14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಾಂಗ್ಲಿಯ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ರಾಜ್ ಠಾಕ್ರೆ ವಿರುದ್ಧ 2008 ರಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 109 ಹಾಗೂ 117 (ಅಪರಾಧ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಸಾಂಗ್ಲಿಯ ಮ್ಯಾಜಿಸ್ಟ್ರೇಟರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ರಾಜ್ ಠಾಕ್ರೆ ಹಾಗೂ ಎಂಎನ್ಎಸ್ ನಾಯಕ ಶಿರೀಶ್ ಪರಾಕರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಹಾಗೂ ಖೆರ್ವಾಡಿ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ಪಾಟೀಲ್ ತಿಳಿಸಿದ್ದಾರೆ.
ಜೂನ್ 8 ರ ಒಳಗಾಗಿ ಇಬ್ಬರೂ ನಾಯಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.ಈ ಮಧ್ಯೆ, 2012 ಕ್ಕೂ ಮೊದಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಸರ್ಕಾರಿ ನಿಯಮವಿದೆ ಎಂದು ಎಂಎನ್ಎಸ್ ಸ್ಥಳೀಯ ನಾಯಕರೊಬ್ಬರು ಪ್ರತಿಪಾದಿಸಿದ್ದಾರೆ.