ಬೆಳಗಾವಿಯ ಖಾನಾಪುರ ತಾಲ್ಲೂಕಿನ ಚುಂಚವಾಡ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮಳೆಯಿಂದಾಗಿ ಮನೆಯ ಗೋಡೆ ಬಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
15 ವರ್ಷದ ಅನಂತು ಧರ್ಮೇಂದ್ರ ಪಾಶೆಟ್ಟಿ ಮೃತಪಟ್ಟ ಬಾಲಕ.
ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಬಾಲಕ ಎದ್ದು ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದ. ಆ ಸಂದರ್ಭದಲ್ಲೇ ಕೊಟ್ಟಿಗೆಯ ಮಣ್ಣಿನ ಗೋಡೆ ಕುಸಿದು ಬಾಲಕ ಅದರಡಿ ಸಿಲುಕಿಕೊಂಡ.
ಗೋಡೆ ಬಿದ್ದ ಸದ್ದು ಹಾಗೂ ಬಾಲಕನ ಚೀರಾಟ ಕೇಳಿ ಮನೆಯ ಸದಸ್ಯರು ತಕ್ಷಣ ಧಾವಿಸಿ, ಬಾಲಕನನ್ನು ಅವಶೇಷಗಳಿಂದ ಹೊರಗೆಳೆಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಂದಗಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗೆ ಬಾಲಕನ ದೇಹವನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.