ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಜಗದೀಪ್ ಧನ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿ ನಾಯಕ ಜಗದೀಪ್ ಧನ್ಕರ್ ಅವರು ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿರುವ ಟಿಎಂಸಿಯ ಮಮತಾ ಬ್ಯಾನರ್ಜಿಯವರೊಂದಿಗೆ ಜಗದೀಪ್ ಧನ್ಕರ್ ಅವರ ಸಂಬಂಧ ಅಳಸಿತ್ತು. ಮಮತಾ ಬ್ಯಾನರ್ಜಿಯವರ ಮೇಲೆ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್ ಅವರು ಹಲವು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಮತಾ ಬ್ಯಾನರ್ಜಿಯವರೂ ಇವರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇವರಿಬ್ಬರ ಜಟಾಪಟಿ ಇತ್ತೀಚಿನವರೆಗೂ ಮುಂದುವರೆಯುತ್ತಲೇ ಬಂದಿದೆ.
ಇವರು ಇಂದು ಬೆಳಿಗ್ಗೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.
ದೆಹಲಿಯ ಮುಖ್ಯಕಚೇರಿಯಲ್ಲಿ ಸಂಸದರ ಸಭೆ ನಡೆಸಿದ ನಂತರ ಬಿಜೆಪಿ ಜಗದೀಪ್ ಧನ್ಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಸಭೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಭಾಗವಹಿಸಿದ್ದರು.
Shri Jagdeep Dhankhar Ji has excellent knowledge of our Constitution. He is also well-versed with legislative affairs. I am sure that he will be an outstanding Chair in the Rajya Sabha & guide the proceedings of the House with the aim of furthering national progress. @jdhankhar1 pic.twitter.com/Ibfsp1fgDt
— Narendra Modi (@narendramodi) July 16, 2022
ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಇದೇ ಅಗಸ್ಟ್ 10 ಕ್ಕೆ ಕೊನೆಗೊಳ್ಳಲಿದೆ.
ಸಂಸತ್ತಿನ ಒಟ್ಟು ಸಂಸದರ ಸಂಖ್ಯೆ 780 ಇದೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲು 390 ಸಂಸದರ ಮತ ಬೇಕು. ಆದರೆ, ಬಿಜೆಪಿಯ 394 ಸಂಸದರು ಸಂಸತ್ತಿನಲ್ಲಿದ್ದಾರೆ. ಆದ್ದರಿಂದ, ಬಹುತೇಕ ಎನ್ಡಿಎಯ ಅಭ್ಯರ್ಥಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ.
ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವವರು ರಾಜ್ಯಸಭೆಯ ಸಭಾಪತಿಯಾಗಿಯೂ ಆಯ್ಕೆಯಾಗುತ್ತಾರೆ.
ಉಪರಾಷ್ಟ್ರಪತಿ ಚುನಾವಣೆಗೆ ನಾಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನಾಂಕ. ಅಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.