ವಾಹನ ನಿಲುಗಡೆ (Vehicle Parking) ಶುಲ್ಕ ಸಂಗ್ರಹ (Parking Fee) ಮಾಡುವವರೇ ನಿಲುಗಡೆ ಮಾಡಲಾದ ವಾಹನದ ಸುರಕ್ಷತೆಯ (Vehicle Safety) ಜವಾಬ್ದಾರರು ಎಂದು ಬೆಂಗಳೂರು ಗ್ರಾಹಕ ವ್ಯವಹಾರಗಳ ನ್ಯಾಯಾಲಯ (Consumer Court) ತನ್ನ ಆದೇಶದಲ್ಲಿ ಹೇಳಿದೆ.
ಒಂದು ವೇಳೆ ನಿಲುಗಡೆ ಮಾಡಲಾದ ವಾಹನ (Parked Vehicle) ಕಳುವಾದರೆ ಅಥವಾ ಆ ವಾಹನಕ್ಕೆ ಹಾನಿಯಾದ್ರೆ ಆಗ ವಾಹನ ನಿಲುಗಡೆ ನಿರ್ವಹಣೆ ನೋಡಿಕೊಳ್ಳುತ್ತಿರುವವರೇ ಪರಿಹಾರ ಪಾವತಿ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ:
ಆಗಸ್ಟ್ 3, 2019ರಂದು ಬೆಂಗಳೂರಿನ (Bengaluru) ಹೆಚ್ಎಸ್ಆರ್ ಬಡಾವಣೆಯ ನಿವಾಸಿ ನಾರಾಯಣಸ್ವಾಮಿ ಕೆ ವಿ ಅವರು ಸಿನಿಮಾ ನೋಡಲು ಸೆಂಟ್ರಲ್ ಸ್ಪಿರಿಟ್ ಮಾಲ್ಗೆ (Central Spirit Mall) ತಮ್ಮ ಕೆಟಿಎಂ ಆರ್ಸಿ 200 ಬೈಕ್ನಲ್ಲಿ (KTM Bike) ಹೋಗಿದ್ದರು. ಮಾಲ್ನ ವಾಹನ ನಿಲುಗಡೆ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ರಶೀದಿಯನ್ನೂ ಪಡೆದಿದ್ದರು.
ಸಿನಿಮಾ ಮುಗಿಸಿ ವಾಪಸ್ ಬರುವಾಗ ಅವರ ಬೈಕ್ ಕಳುವಾಗಿತ್ತು. ವಾಹನ ನಿಲುಗಡೆ ನೋಡಿಕೊಳ್ತಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ್ರೆ ವಾಹನ ಕಳುವಾದ್ರೆ ಅಥವಾ ಹಾನಿಯಾದ್ರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ವಾದಿಸಿದ್ದರು.
ಬಳಿಕ ನಾರಾಯಣಸ್ವಾಮಿ ಅವರು ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಿಸಿದ್ದರು.
ಇದಾದ ಬಳಿಕ ಬೆಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ ಆಗಸ್ಟ್ 2020ರಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಮಾಲ್ನ ಆಡಳಿತ ಮಂಡಳಿ ಮತ್ತು ವಾಹನ ನಿಲುಗಡೆಗೆ ಮಾಹಿತಿ ತಂತ್ರಜ್ಞಾನದ ನೆರವು ನೀಡ್ತಿದ್ದ ವಾಲ್ಟೇಜ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು.
ನ್ಯಾಯಾಲಯ ಹೇಳಿದ್ದೇನು..?
ವಾಹನ ನಿಲುಗಡೆ ಸೇವೆ ನೀಡುವುದಾಗಿ ಒಪ್ಪಿ ಮಾಲ್ ರಶೀದಿಯನ್ನು ನೀಡಿದೆ ಮತ್ತು ದೂರದಾರರು ಅದನ್ನು ಒಪ್ಪಿಕೊಂಡು ಆ ಸೇವೆಗಾಗಿ ಶುಲ್ಕವನ್ನೂ ಪಾವತಿಸಿದ್ದಾರೆ. ಹೀಗಾಗಿ ಮಾಲ್ನವರ ಕಸ್ಟಡಿಯಲ್ಲಿದಾಗಲೂ ಬೈಕ್ ಕಳ್ಳತನ ಆಗಿರುವುದು ಶುಲ್ಕ ಪಾವತಿಸಲಾಗಿದ್ದ ಅವಧಿಯಲ್ಲಿ ಮಾಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಸೇವೆಯಲ್ಲಿನ ಲೋಪ ಎಸಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಎಷ್ಟು ಪರಿಹಾರ..?
ಏಪ್ರಿಲ್ 28, 2023ರಂದು ನೀಡಿದ ಆದೇಶದಲ್ಲಿ ದೂರದಾರ ನಾರಾಯಣಸ್ವಾಮಿ ಅವರಿಗೆ ಕಳುವಾದ ಬೈಕ್ನ ಮೊತ್ತ 1,05,288 ರೂಪಾಯಿ, ನಿರ್ಲಕ್ಷ್ಯತೆಗಾಗಿ 10 ಸಾವಿರ ರೂಪಾಯಿ ಮತ್ತು ನ್ಯಾಯಾಲಯದ ವೆಚ್ಚವಾಗಿ 5 ಸಾವಿರ ರೂಪಾಯಿ ಅಂದರೆ ಒಟ್ಟು 1,20,288 ರೂಪಾಯಿಯನ್ನು ಪಾವತಿಸುವಂತೆ ಮಾಲ್ ಮ್ಯಾನೇಜ್ಮೆಂಟ್ಗೆ ಸೂಚಿಸಿದೆ.
ADVERTISEMENT
ADVERTISEMENT