ವಾಜಪೇಯಿ ಭಾಷಣದ ವೀಡಿಯೋ ಟ್ವೀಟಿಸಿ ಮೋದಿ, ಶಾಗೆ ಕುಟುಕಿದ ಬಿಜೆಪಿ ಸಂಸದ ವರುಣ್‌ಗಾಂಧಿ..!

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ರೈತರ ಹೋರಾಟ ಬೆಂಬಲಿಸಿ ಮಾಡಿದ್ದ ಭಾಷಣವನ್ನು ನೆನೆಪಿಸುವ ಮೂಲಕ ಫಿಲಿಬಿಟ್ ಬಿಜೆಪಿ ಸಂಸದ ವರುಣ್ ಗಾಂಧಿ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ಮುಂದುವರಿಸಿದ್ದಾರೆ.

1980ರಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ ವಾಜಪೇಯಿ ಭಾಷಣ ಮಾಡಿದ್ದರು. `ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇನೆ. ರೈತರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿ. ಹೆದರಿಸುವ ಪ್ರಯತ್ನ ಮಾಡಬೇಡಿ. ರೈತರು ಹೆದರುವವರು ಅಲ್ಲ. ರೈತರ ಆಂದೋಲನವನ್ನು ರಾಜಕೀಯಕ್ಕಾಗಿ ಬಳಸಲು ಇಷ್ಟಪಡಲ್ಲ. ಆದರೆ ನಾವು ರೈತರ ನೈಜ ಬೇಡಿಕೆಗಳನ್ನು ಬೆಂಬಲಿಸುತ್ತೇವೆ. ಒಂದು ವೇಳೆ ಸರ್ಕಾರ ಹೋರಾಟವನ್ನು ದಮನ ಮಾಡುವ ಪ್ರಯತ್ನ ಪಟ್ಟರೆ, ಕಾನೂನು ದುರುಪಯೋಗಪಡಿಸಿಕೊಂಡರೆ, ಶಾಂತಿಯುತವಾದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಆಗ ರೈತರ ಹೋರಾಟದಲ್ಲಿ ಧುಮುಕಲು ನಾವು ಸಂಕೋಚ ಮಾಡಲ್ಲ, ನಾವು ಅವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದ್ದೇವೆ‘ ಎಂದು ವಾಜಪೇಯಿ ಭಾಷಣವನ್ನು ಟ್ವೀಟಿಸಿದ್ದಾರೆ.

ಈ ಭಾಷಣದ ತುಣಕನ್ನು ಟ್ವೀಟಿಸುವುದರ `ವಿಶಾಲ ಹೃದಯದ ನಾಯಕ ವಿವೇಕದ ಮಾತುಗಳು’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.

ರೈತರ ಹೋರಾಟವನ್ನು ಬೆಂಬಲಿಸುತ್ತಲೇ ಬಂದಿರುವ ವರುಣ್ ಗಾಂಧಿ ಉತ್ತರಪ್ರದೇಶದ ಲಖೀಂಪುರ್‌ಖೇರಿಯಲ್ಲಿ ರೈತರ ಮೇಲೆ ಜೀಪ್ ಹತ್ತಿಸಿ ಕೊಲೆ ಮಾಡಿದ್ದನ್ನು ಖಂಡಿಸಿದ್ದರು. ಜೊತೆಗೆ ಸಿಬಿಐ ತನಿಖೆ ನಡೆಸುವಂತೆ ಸಿಎಂ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದರು.

ಈ ಬಹಿರಂಗ ಟಿಪ್ಪಣಿಗಳ ಬಳಿಕ ಇತ್ತೀಚೆಗೆ ಪುನರ್‌ರಚನೆ ಆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ವರುಣ್ ಗಾಂಧಿ ಮತ್ತು ಮನೇಕಾ ಗಾಂಧಿ ಇಬ್ಬರನ್ನೂ ಹೊರಗಿಡಲಾಗಿತ್ತು.

LEAVE A REPLY

Please enter your comment!
Please enter your name here