ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಲಿಲಿತಾ ನಾಯಕ್ ಮನೆಗೆ ಬೆದರಿಕೆ ಪತ್ರ ಕಳುಹಿಸಿರುವ ಕಿಡಿಗೇಡಿಗಳು ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿ 61 ವ್ಯಕ್ತಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿ.ಟಿ.ಲಲಿತಾ ನಾಯಕ್ ಅವರ ಸಂಜಯನಗರ ನಿವಾಸದ ವಿಳಾಸಕ್ಕೆ ಕೊಲೆ ಬೆದರಿಕೆ ಪತ್ರ ಬಂದಿದೆ. ಜುಲೈ ತಿಂಗಳಿನಲ್ಲಿಯೇ 2ನೇ ಬೆದರಿಕೆ ಪತ್ರವನ್ನು ಕಿಡಿಗೇಡಿಗಳು ಕಳುಹಿಸಿದ್ದಾರೆ. ಈ ಹಿಂದೆ ಜುಲೈ 2 ರಂದು ಬೆದರಿಕೆ ಪತ್ರ ಬಂದಿತ್ತು. ಆ ಪತ್ರದಲ್ಲಿಯೂ ಬಿ.ಟಿ.ಲಲಿತಾ ನಾಯಕ್, ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಹಲವು ಸಾಹಿತಿಗಳ, ರಾಜಕಾರಣಗಳ ಹೆಸರು ಉಲ್ಲೇಖವಾಗಿತ್ತು.
ಶುಕ್ರವಾರ ಸಂಜೆ ಬಿ.ಟಿ.ಲಲಿತಾ ನಾಯಕ್ ಅವರ ಮನೆ ವಿಳಾಸಕ್ಕೆ ಬಂದಿರುವ ಬೆದರಿಕೆ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕೆಲವು ಸಾಹಿತಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಬಿ.ಟಿ.ಲಲಿತಾ ನಾಯಕ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ಸಂಸದ ಡಿ.ಕೆ.ಸುರೇಶ್ ಹೀಗೆ ಒಟ್ಟು 61 ಮಂದಿಯನ್ನು ಶೀಘ್ರವೇ ಮುಗಿಸುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.