ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆಗಳಲ್ಲಿ ಮಳೆಯ ಅವಾಂತರಗಳು ಮುಂದುವರಿದಿವೆ. ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ ಮನೆಯ ಗೋಡೆ ಇಂದು ನಸುಕಿನ ಜಾವ ಕುಸಿದುಬಿದ್ದು ತಾಯಿ-ಮಗಳು ಮೃತಪಟ್ಟಿದ್ದಾರೆ.
ಹಳಿಯಾಳ ತಾಲ್ಲೂಕಿನ ಮುರ್ಕವಾಡ ಗ್ರಾಮದಲ್ಲಿ ಇಂದು ನಸುಕಿನ ಜಾವ ಭಾರೀ ಮಳೆಗೆ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ. 37 ವರ್ಷದ ರುಕ್ಮಿಣಿ ವಿಠಲ್ ಮಾಚಕ ಮತ್ತು 13 ವರ್ಷದ ಬಾಲಕಿ ಶ್ರೀದೇವಿ ಮೃತಪಟ್ಟವರಾಗಿದ್ದಾರೆ.
ಇನ್ನೂ 5 ದಿನ ಮಳೆ ಮುಂದುವರಿಕೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಇನ್ನೂ 5 ದಿನಗಳ ಕಾಲ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ರಾಜ್ಯದ ಕರಾವಳಿ ಭಾಗ, ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ.