ಮೂಡಬಿದ್ರೆ : ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಆಶ್ರಯ ಕಾಲೋನಿ ಬಳಿಯ ಕೊಲ್ನಾಡು ಕೈಗಾರಿಕಾ ಪ್ರದೇಶದ ಸೈಟ್ ನ ಕಲ್ಲಿನ ಕೋರೆಯಲ್ಲಿ ಬಂಡೆಗಲ್ಲಿಗೆ ಕೆಲಸಗಾರರು ಡೈನಮೆಟ್ ಸ್ಪೋಟಿಸುವಾಗ ಸ್ಥಳೀಯ ಮನೆಗಳಿಗೆ ಹಾನಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಶ್ರಯ ಕಾಲೋನಿ ನಿವಾಸಿಗಳಾದ ಫೌಜಿಯಾ, ಮಾದೇವಿ ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಆಶ್ರಯ ಕಾಲೋನಿಯ ಬಳಿ ಕೈಗಾರಿಕಾ ಪ್ರದೇಶದ ಸೈಟ್ ನಲ್ಲಿರುವ ಕಲ್ಲಿನ ಕೋರೆಯಲ್ಲಿ, ಮೂಡಬಿದ್ರೆ ನಿವಾಸಿ ಗುತ್ತಿಗೆದಾರ ಬಾಬು ಎಂಬವರ ಮೂವರು ಕೆಲಸಗಾರರು ಬಂಡೆ ಕಲ್ಲು ತೆಗೆಯಲು ಡೈನಮೆಟ್ ನಿಂದ ಸ್ಪೋಟಿಸಿದ್ದು ಪರಿಸರದಲ್ಲಿ ಭಾರೀ ಶಬ್ದ ಉಂಟಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಸ್ಪೋಟದ ತೀವ್ರತೆಗೆ ಸುಮಾರು ಅರ್ಧ ಕಿಮೀ ಪರಿಸರದ ಸುಜಾತ, ಫೌಜಿಯ, ಪುಷ್ಪ, ಮೈಮುನ, ರೆಹನಾ ಮತ್ತಿತರರ ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ
ಸ್ಥಳಕ್ಕೆ ಮುಲ್ಕಿ ನಪಂ ಸದಸ್ಯ ಶೈಲೇಶ್, ಮಾಜಿ ಸದಸ್ಯ ಬಶೀರ್ ಕುಳಾಯಿ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಕಲ್ಲಿನ ಕೋರೆ ಗುತ್ತಿಗೆದಾರರು ಕ್ಷಮಾಪಣೆ ಕೇಳಿದ್ದು ಹಾನಿ ಸಂಬಂಧ ಪರಿಹಾರ ವಿತರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.