ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ನಲ್ಲಿ ಮಹತ್ವದ ಬೆಳವಣಿಗೆ ಆಗುವ ಎಲ್ಲಾ ಸಾಧ್ಯತೆಗಳಿವೆ.
ಅದರಲ್ಲೂ ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಸಂಬಂಧಪಟ್ಟಂತೆ ಜೆಡಿಎಸ್ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಹೊಳೆನರಸೀಪುರ ಕ್ಷೇತ್ರದಲ್ಲಿ ಈ ಬಾರಿ ಹೆಚ್ ಡಿ ರೇವಣ್ಣ ಅವರು ಸ್ಪರ್ಧೆ ಮಾಡಲ್ಲ. ಬದಲಿಗೆ ಆ ಕ್ಷೇತ್ರವನ್ನು ತಮ್ಮ ಪತ್ನಿ ಭವಾನಿ ರೇವಣ್ಣ ಅವರಿಗೆ ಬಿಟ್ಟುಕೊಡುವ ನಿರೀಕ್ಷೆ ಇದೆ.
ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆಯಾದರೂ ಅಲ್ಲಿ ಮಾಜಿ ಶಾಸಕ ದಿವಂಗತ ಹೆಚ್ ಎಸ್ ಪ್ರಕಾಶ್ ಅವರ ಪುತ್ರ ಹೆಚ್ ಪಿ ಸ್ವರೂಪ್ ಅವರಿಗೆ ಟಿಕೆಟ್ ನೀಡುವುದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾಸನ ಬದಲು ಸುರಕ್ಷಿತ ಕ್ಷೇತ್ರವಾಗಿ ಹೊಳೆನರಸೀಪುರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ದಟ್ಟವಾಗಿದೆ.
ಇತ್ತ ಹೆಚ್ ಡಿ ರೇವಣ್ಣ ಅವರು ತಮ್ಮ ಚುನಾವಣಾ ರಾಜಕೀಯವನ್ನು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಕ್ಷೇತ್ರಕ್ಕೆ ವರ್ಗಾಯಿಸುವ ನಿರೀಕ್ಷೆ ಇದೆ.
ಕೆ ಆರ್ ಪೇಟೆಯಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದೆಯಾದರೂ ಪಕ್ಷದ ಈಗಿನ ಅಭ್ಯರ್ಥಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಹೆಚ್ ಟಿ ಮಂಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕೆ ಅರ್ ಪೇಟೆಯಿಂದ ರೇವಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.